ಅಡಕೆಗೆ ಎಲೆಚುಕ್ಕಿ ರೋಗ: ಸದನದಲ್ಲಿ ಚರ್ಚೆ
– ಸಬ್ಸಿಡಿ ದರದಲ್ಲಿ ಔಷಧಿ ಹಾಗೂ ಉಚಿತ ವಿತರಣೆಗೂ ಚಿಂತನೆ
– ರಾಜ್ಯದಲ್ಲಿ 53977 ಹೆಕ್ಟೇರ್ನಷ್ಟು ಪ್ರದೇಶ ಎಲೆಚುಕ್ಕಿ ರೋಗಕ್ಕೆ ಬಲಿ
NAMMUR EXPRESS NEWS
ವಿಧಾನಸಭೆ: ರಾಜ್ಯದ ಅಡಕೆ ಬೆಳೆಗಾರ ಎದುರಿಸುತ್ತಿರುವ ಎಲೆಚುಕ್ಕಿ ರೋಗದ ಸಮಸ್ಯೆ ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅಡಕೆ ಬೆಳೆ ಪ್ರದೇಶದ ಶಾಸಕರ ಆತಂಕಕ್ಕೆ ಸರ್ಕಾರವೂ ಧ್ವನಿಗೂಡಿಸಿ. ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂಬುದಾಗಿ ಒಪ್ಪಿಕೊಂಡಿತು. ಅಲ್ಲದೇ, ಎಲೆಚುಕ್ಕಿ ರೋಗ ನಿರ್ವಹಣೆಯ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಬೆಳೆಗಾರರಿಗೆ ಒದಗಿಸುವ ಬಗ್ಗೆ ಸಕಾರಾತ್ಮಕ ಪರಿಶೀಲನೆಯ ಭರವಸೆ ನೀಡಿತು. ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ.ನಾಯಕ್ ಪ್ರಶೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ, ಆರಗ ಜ್ಞಾನೇಂದ್ರ, ಟಿ.ಡಿ.ರಾಜೇಗೌಡ, ಭಾಗೀರಥಿ ಮರುಳ್ಳ ಮತ್ತಿತರರಿಂದ ಬೆಂಬಲ ದೊರೆಯಿತು. ‘ರಾಜ್ಯದಲ್ಲಿ ಎಲೆಚುಕ್ಕಿ ರೋಗದಿಂದ ಹಾನಿಗೊಳಗಾದ ಅಡಕೆ ಬೆಳೆ ಪ್ರದೇಶ ಹಾಗೂ ರೋಗಕ್ಕೆ ಮೂಲ ಕಾರಣ’ಗಳ ಬಗ್ಗೆ ಭೀಮಣ್ಣ ನಾಯಕ್ ಪ್ರಶ್ನಿಸಿದರೆ, ಈ ರೋಗ ನಿವಾರಣೆಗೆ ಖಚಿತವಾದ ಕ್ರಮಗಳು ಏನು ಎಂಬುದನ್ನು ಆರಗ ಜ್ಞಾನೇಂದ್ರ ತಿಳಿಯಬಯಸಿದರು. ಟಿ.ಡಿ.ರಾಜೇಗೌಡ ಮತ್ತು ಭಾಗೀರಥಿ ಮರುಳ್ಳ ನಿರ್ಣಾಯಕ ಕ್ರಮಗಳು ಆಗದೇ ಇದ್ದರೆ ಬಹುದೊಡ್ಡ ಆರ್ಥಿಕ ಸಂಕಷ್ಟವನ್ನು ಇದನ್ನೇ ಅವಲಂಬಿಸಿರುವ ಬೆಳೆಗಾರರು ಅನುಭವಿಸಬೇಕಾಗುತ್ತದೆ ಎಂದು ಕಳವಳ ತೋಡಿಕೊಂಡರು. ಸದಸ್ಯರ ಭಾವನೆಗಳಿಗೆ ಸ್ಪಂದಿಸಿದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ‘ರಾಜ್ಯದಲ್ಲಿ 53977 ಹೆಕ್ಟೇರ್ನಷ್ಟು ಪ್ರದೇಶ ಎಲೆಚುಕ್ಕಿ ರೋಗಕ್ಕೆ ಬಲಿಯಾಗಿದೆ’ ಎಂಬ ಆಘಾತಕಾರಿ ಮಾಹಿತಿ ನೀಡಿದರು. ಮೂರು ವಿಭಿನ್ನ ಶಿಲೀಂಧ್ರಗಳಿಂದ ಈ ರೋಗ ಬರುತ್ತದೆ. ಎಂಬುದನ್ನು ವಿವರಿಸಿದರು. ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ತೇವ ಭರಿತ ಬಿಸಿಲಿನ ವಾತಾವರಣ, 18 ರಿಂದ 24 ಡಿಗ್ರಿ ಒಳಗಿನ ಕಡಿಮೆ ಉಷ್ಣಾಂಶ ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕ ಅಂಶಗಳು ಎಂದು ಹೇಳಿದರು. ಸಂಶೋಧನೆಗೆ 50 ಲಕ್ಷ :- ಎಲೆಚುಕ್ಕಿ ರೋಗ ನಿವಾರಣೆ ಮತ್ತು ನಿರ್ವಹಣೆ ಬಗ್ಗೆ ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ ವಿಶೇಷ ಸಂಶೋಧನೆ ನಡೆಯುತ್ತಿದೆ. ಸಂಶೋಧನೆಗಾಗಿ ಈಗಾಗಲೇ 50 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ ಹೇಳಿದರು. ಅಲ್ಲದೇ ಅಡಕೆ ಬೆಳೆಗಾರರ ನಷ್ಟ ಪರಿಹಾರಕ್ಕೆ 225 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಕೇಂದ್ರದಿಂದ ಸೂಕ್ತ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ನುಡಿದರು.