ಕರಾವಳಿ ಟಾಪ್ ನ್ಯೂಸ್
– ಬಂಟ್ವಾಳ: ಪುರಸಭೆ ಸದಸ್ಯನ ಗ್ಯಾಂಗ್ ನಿಂದ ಗರ್ಭಿಣಿ ಮಹಿಳೆ ಇರೋ ಮನೆಗೆ ನುಗ್ಗಿ ಹಲ್ಲೆ
– ಮಂಗಳೂರು: ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ
– ಮಣಿಪಾಲ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ, ಓರ್ವ ಮೃತ್ಯು : ಮತ್ತೋರ್ವ ಗಂಭೀರ
NAMMUR EXPRESS NEWS
ಬಂಟ್ವಾಳ: ಬಂಟ್ವಾಳದ ಬಿ.ಮೂಡ ಗ್ರಾಮದಲ್ಲಿ ಕಾಂಗ್ರೆಸ್ ಪುರಸಭೆ ಸದಸ್ಯನ ಪಟಾಲಂ ಗರ್ಭಿಣಿ ಮಹಿಳೆ ಇರುವ ಮನೆಗೆ ನುಗ್ಗಿ ಗೂಂಡಗಿರಿ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಹೌದು, ಬಂಟ್ವಾಳ ಪುರಸಭೆ ಸದಸ್ಯ, ರೌಡಿಶೀಟರ್ ಆಗಿರೊ ಅಸೈನರ್ ತಂಡದಿಂದ ಈ ದಾಂಧಲೆ ನಡೆದಿದ್ದು ಮನೆ ಬಾಡಿಗೆ ವ್ಯಾಜ್ಯ ಸಂಬಂಧ ಮಧ್ಯರಾತ್ರಿ ಗರ್ಭಿಣಿ ಮಹಿಳೆ ಇದ್ದ ಮನೆಗೆ ನುಗ್ಗಿ ಪುರುಷರ ಮೇಲೆ ಹಲ್ಲೆ ಮಾಡಲಾಗಿದೆ. ಸಾಹುಲ್ ಹಮೀದ್ ಎಂಬುವವರ ಮನೆಗೆ ಮಧ್ಯರಾತ್ರಿ ನುಗ್ಗಿ ಅಸೈನರ್ ಹಲ್ಲೆಮಾಡಿದ್ದಾನೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಇನ್ನು ಈ ವೇಳೆ 112ಗೆ ಕರೆ ಮಾಡಿದ್ದು, ಇದರಿಂದ ಪೊಲೀಸರು ಬಂದಿದ್ದರಿಂದ ಅನಾಹುತ ತಪ್ಪಿದೆ. ಹಲ್ಲೆಯಿಂದ ಕೆಲವರಿಗೆ ಗಾಯಗಳಾಗಿದ್ದು, ಬಂಟ್ವಾಳ ಟೌನ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು- ಪ್ರತಿದೂರು ದಾಖಲಾಗಿದೆ. ಪೊಲೀಸರು ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರೋ ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ.
* ಮಂಗಳೂರು: ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ
ಮಂಗಳೂರು: ಸರ್ಕಾರಿ ನೌಕರನೊಬ್ಬ ತನ್ನ ಅಧಿಕಾರ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು, 9/11 ದಾಖಲೆ ನೀಡಲು ಹಣದ ಬೇಡಿಕೆ ಇಟ್ಟಿದ್ದ ಪಿಡಿಒ ಒಬ್ಬರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿದೆ. ಕಡಬ ತಾಲ್ಲೂಕಿನ (ಮಂಗಳೂರು) ಐತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ನಾಯ್ಕ 9/11ರ ದಾಖಲೆ ನೀಡಲು ₹9,000 ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇಲೆ 2019ರ ಜೂನ್ 3ರಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶ್ಯಾಮಸುಂದರ ಎಚ್.ಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಡಿ. 13ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
* ಮಣಿಪಾಲ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ, ಓರ್ವ ಮೃತ್ಯು : ಮತ್ತೋರ್ವ ಗಂಭೀರ
ಉಡುಪಿ: ಮಣಿಪಾಲ ನಗರ ಠಾಣೆ ವ್ಯಾಪ್ತಿಯ ಅಲೆವೂರು – ಮಣಿಪಾಲ ರಸ್ತೆಯ ಶಾಂತಿನಗರದ ಬಳಿ ತಿರುವಿನಲ್ಲಿ ಮರಳು ಸಾಗಾಟದ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಸವಾರ ಕಾರವಾರ ಮೂಲದ ವ್ಯಕ್ತಿ ಮೃತಪಟ್ಟರೆ, ಸಹಸವಾರ ಹಿರಿಯಡ್ಕ ಪರಿಸರದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆ ಡಿ. 13 ರಂದು ರಾತ್ರಿ 9.30ರ ವೇಳೆಗೆ ಸಂಭವಿಸಿದ್ದು, ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ಓರ್ವ ವ್ಯಕ್ತಿ ಮೃತಪಟ್ಟ ಬಗ್ಗೆ ವೈದ್ಯರು ದೃಢಪಡಿಸಿದರು. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮರಳು ಸಾಗಾಟದ ಟಪ್ಪರ್ ಢಿಕ್ಕಿ ಹೊಡೆದಿದೆ.ಈ ಟಿಪ್ಪರ್ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಈ ಟಪ್ಪರ್ ನ ದಾಖಲೆಗಳು ಸರಿ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಣಿಪಾಲ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.