- ದೇವಂಗಿ ಸಮೀಪದ ಮಳೂರಿನಲ್ಲಿ ಆನೆ ಸೆರೆ
- ತೀರ್ಥಹಳ್ಳಿ ತಾಲೂಕಲ್ಲಿ ಸುದ್ದಿ ಮಾಡಿದ್ದ ಕಾಡಾನೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಭೀತಿ ಹುಟ್ಟಿಸಿದ್ದ ಕಾಡಾನೆ ಅಂತೂ ಸೆರೆಯಾಗಿದೆ. 2 ತಿಂಗಳ ಕಾರ್ಯಚರಣೆ ಯಶಸ್ವಿಯಾಗಿದೆ.
ಡಿಸೆಂಬರ್ 31ರಂದು ಮೇಳಿಗೆ ಮೂಲಕ ಪಟ್ಟಣಕ್ಕೆ ಎಂಟ್ರಿಯಾಗಿದ್ದ ಆನೆ ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಿ ಭಾರೀ ಸುದ್ದಿ ಮಾಡಿತ್ತು. ಈ ಕಾಡಾನೆಯನ್ನು ಸತತವಾಗಿ ಅರಣ್ಯ ಇಲಾಖೆಯ ಶ್ರಮ, ಸಕ್ರೆಬೈಲ್ ಆನೆಗಳು ಮತ್ತು ಮಾವುತರ ಕಾರ್ಯಚರಣೆ ಮೂಲಕ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೂರು ದೇವಂಗಿ ಸಮೀಪ ಕಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಕಳೆದೊಂದು ವಾರದಿಂದ ಆನೆ ಹಿಡಿಯುವ ಕಾರ್ಯಚರಣೆ ಮಾಡಲಾಗುತ್ತಿತ್ತು. 9 ದಿನಗಳ ಕಾರ್ಯಾಚರಣೆ ಅಂತ್ಯಗೊಂಡಿದೆ.
ತೀರ್ಥಹಳ್ಳಿ ಪಟ್ಟಣ ಸೇರಿ ಮೇಲಿನ ಕುರುವಳ್ಳಿ, ದೇವಂಗಿ ,ಹಾರೋ ಗಳಿಗೆ ಮುಂತಾದ ಗ್ರಾಮಗಳಲ್ಲಿ ಕೆಲವು ತಿಂಗಳಿಂದ ಈ ಆನೆ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದೆ ಎಂಬ ದೂರಿನ ಮೇರೆಗೆ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಕ್ರೆ ಬೈಲಿನ ಆನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭವಾಗಿತ್ತು.
ಗುರುವಾರ ತಡರಾತ್ರಿ ದೇವಂಗಿ ಸಮೀಪದ ಮಳೂರಿನಲ್ಲಿ ಆನೆಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸಕ್ರೇಬೈಲಿನ ಬಾಲಣ್ಣ, ಸಾಗರ್, ಭಾನುಮತಿ ಆನೆಯ ಸಹಾಯದಿಂದ ಸೆರೆ ಹಿಡಿಯಲಾಗಿದೆ. 8-9 ವರ್ಷದ ಗಂಡಾನೆ ಹಿಡಿಯಲಾಗಿದೆ.
ಆಗುಂಬೆ ಆನೆ ಆಪರೇಷನ್ ಯಾವಾಗ?
ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲೂ ಕೂಡ ಕಾಡಾನೆಯೊಂದು ರೈತರಿಗೆ ದಶಕಗಳಿಂದ ತೊಂದರೆ ಕೊಡುತ್ತಿದೆ. ಆ ಆನೆ ಈಗಾಗಲೇ ಹಲವರ ಬಲಿ ಕೂಡ ಪಡೆದಿದೆ. ನೂರಾರು ಎಕರೆ ತೋಟ ಹಾಳು ಮಾಡಿದೆ. ರೈತರು, ಜನರು ಭಯದಲ್ಲೇ ಬದುಕುತ್ತಿದ್ದಾರೆ. ಆ ಆನೆಯನ್ನು ಹಿಡಿಯಬೇಕು ಎಂಬ ಒತ್ತಡ ಹೆಚ್ಚಾಗಿದೆ. ಅರಣ್ಯ ಇಲಾಖೆ ತಕ್ಷಣ ಈ ಬಗ್ಗೆ ಗಮನ ವಹಿಸಬೇಕಿದೆ.