- ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
- ಇದು ನನ್ನ ಕೊನೆ ಚುನಾವಣೆ, ಈ ಚುನಾವಣೆ ಮಂಜುನಾಥ ಗೌಡರ ನೇತೃತ್ವ: ಕಿಮ್ಮನೆ
NAMMUR EXPRESS NEWS
ತೀರ್ಥಹಳ್ಳಿ : ಏ.19ಕ್ಕೆ ನಾನು ಎಲ್ಲಾ ಅಭಿಮಾನಿಗಳು, ತೀರ್ಥಹಳ್ಳಿ ಸಮಸ್ತ ಜನತೆಯ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುತ್ತೇನೆ. ಈ ಚುನಾವಣೆಯನ್ನು ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಮಾಡುತ್ತೇವೆ. ಜ್ಞಾನೇಂದ್ರ ಅವರ ಸುಳ್ಳುಗಳು, ಅವರ ಕೆಲವು ಬೆಂಬಲಿಗರ ದರ್ಪ ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸುತ್ತದೆ ಎಂದು ತೀರ್ಥಹಳ್ಳಿ ಮಾಜಿ ಶಾಸಕ, ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರ ಮನೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಆರಗ ಜ್ಞಾನೇಂದ್ರ ಅವರು ನಾನು ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ ಯೋಜನೆಗಳನ್ನು ನಾನು ಮಾಡಿಸಿದ್ದು ಎಂದು ಎಲ್ಲಾ ಕಡೆ ಬೋರ್ಡ್ ಹಾಕಿಕೊಂಡಿದ್ದಾರೆ. ಎಲ್ಲಾ ಕಡೆ ಕಳಪೆ ಕಾಮಗಾರಿ ಮಾಡಲಾಗಿದೆ. ಜನರೇ ಇದೀಗ ಎಲ್ಲಾ ಕಡೆ ಹಿಡಿಶಾಪ ಹಾಕುತ್ತಿದ್ದಾರೆ. ಜ್ಞಾನೇಂದ್ರ ಅವರ ಜತೆ ಇದ್ದ ಕೆಲವೇ ಕೆಲವು ಕಾರ್ಯಕರ್ತರು ಹಣ, ಅಧಿಕಾರ ಬಳಿಸಿಕೊಂಡು ಪ್ರಾಮಾಣಿಕ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಹೀಗಾಗಿ ಅವರೇ ಈ ಚುನಾವಣೆಯಲ್ಲಿ ತಟಸ್ಥರಾಗಲಿದ್ದಾರೆ ಎಂದರು.
ಮಹಿಷಿ, ಚಂಗಾರು, ಕುಡನೆಲ್ಲಿ ಸೇತುವೆ, ಕ್ಷೇತ್ರದ ಎಲ್ಲಾ ಪ್ರಮುಖ ರಸ್ತೆಗಳು, ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿ ಅನೇಕ ಯೋಜನೆ ಮಾಡಿದ್ದೆವು. ಇವರ ಕಾಲದಲ್ಲಿ ಹಣ ಮಾಡುವ ಯೋಜನೆಗಳು ಆಗಿವೆ. ಕಳಪೆ ಕಾಮಗಾರಿಯಿಂದ ಜನ ರೊಚ್ಚಿಗೆದ್ದಿದ್ದಾರೆ ಎಂದು ಆರೋಪಿಸಿದರು.
ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದರೂ ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಆರಗ ಜ್ಞಾನೇಂದ್ರ ಅವರು ಬರೀ ಉಳ್ಳವರ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ 20 ವರ್ಷ ಅಧಿಕಾರ ಇದ್ದು ಏನೂ ಮಾಡಿಲ್ಲ. ನನ್ನ ಕೊನೆ ಚುನಾವಣೆ ಇದು. ಅವರು ಹಾಗಾದ್ರೆ ಯುವಕರಿಗೆ ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.
ಡಾ. ಆರ್. ಎಂ. ಮಂಜುನಾಥ ಗೌಡ, ನಾರಾಯಣರಾವ್, ಕಡ್ತುರು ದಿನೇಶ್, ಕಲಗೋಡು ರತ್ನಾಕರ್, ಮುಡುಬ ರಾಘವೇಂದ್ರ, ಪ್ರಚಾರ ಸಮಿತಿ ಅಧ್ಯಕ್ಷವಿಶ್ವನಾಥ ಶೆಟ್ಟಿ ಝೆಡ್ ಯಲ್ಲಪ್ಪ, ಕಟ್ಟೆಹಕ್ಕಲು ಕಿರಣ್, ಸುಶೀಲಾ ಶೆಟ್ಟಿ, ರತ್ನಾಕರ್ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ, ಪುಟ್ಟೋಡ್ಲು ರಾಘವೇಂದ್ರ, ಅಮರನಾಥ ಶೆಟ್ಟಿ, ಜೈಕರ ಶೆಟ್ಟಿ, ನಾಗರಾಜ್ ಕುರುವಳ್ಳಿ ಸೇರಿದಂತೆ ಹಲವರು ಇದ್ದರು.