- ಆಶ್ರಮದಲ್ಲಿ ಮುಂದಿನ ಸಿಎಂ ಜಪ
- 3 ಉಂಗುರ ಇಟ್ಟು ಗುರೂಜಿ ಹೇಳಿದ್ದೇನು?
ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಡಿಕೆ ಶಿವಕುಮಾರ್ ಸಿಎಂ ಆಗಲು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ವಿನಯ್ ಗುರೂಜಿ ಡಿಕೆಶಿ ಮುಂದೆ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ನಮಗೆ ಟಿಕೆಟ್ ನೀಡಿ ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯ ಹಿಂದಿನ ಶಕ್ತಿಯೇ ಡಿ.ಕೆ.ಶಿವಕುಮಾರ್. ನಾವು ಬೇರೇನೂ ಕೇಳಲ್ಲ, ಅವರು ಸಿಎಂ ಆಗಲೆಂದು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಜೆಡಿಎಸ್ ಎಂಎಲ್ಸಿ ಶರವಣರಿಂದಲೂ ಕೂಡ ಡಿಕೆ ಶಿವಕುಮಾರ್ ಸಿಎಂ ಅಗಲಿ ಎನ್ನುವ ಮೂಲಕ ಹೊಸ ರಾಜಕೀಯಕ್ಕೆ ಕಾರಣರಾಗಿದ್ದಾರೆ.
3 ಉಂಗುರ 3 ಸಿಎಂ!: ಗುರುಗಳು ಮೂರು ಉಂಗುರವನ್ನು ರೆಡಿ ಮಾಡಿ ಇಟ್ಟಿದ್ದರು. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಒಂದು ಉಂಗುರ ಕೊಟ್ರು, ಮತ್ತೊಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪಗೆ ಒಂದು ಕೊಟ್ಟರು. ಮೂರನೇ ಉಂಗುರವನ್ನು ಡಿಕೆ ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ, ಅದಕ್ಕೆ ನಾನೇ ಸಾಕ್ಷಿ. ಸರ್ಕಾರ ಬರುತ್ತೆ ಅಂತಾ ಡಿ.ಕೆ.ಶಿವಕುಮಾರ್ ಅವರಿಗೆ ಉಂಗುರ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಬರಲ್ವಾ ಅಂದೆ, ಅದಕ್ಕೆ ಡಿಕೆ ಸರ್ಕಾರ ಎಂದಿದ್ದರು.
ಶರವಣ, ತಮ್ಮಯ್ಯ ಮನವಿಯನ್ನು ಪುರಸ್ಕರಿಸಿದ ವಿನಯ ಗುರೂಜಿ, ಪ್ರಮಾಣ ವಚನದಲ್ಲಿ ಇರಬೇಕು ಎಂದಿದ್ದೆ, ಹಾಗಿಯೇ ಆಯ್ತು. ಶಾಸಕ ತಮ್ಮಯ್ಯ ಬಯಕೆ ಈಡೇರಿಕೆ ದಿನ ಬಹಳ ದೂರವಿಲ್ಲ. ಡಿಕೆ ಶಿವಕುಮಾರ್ ಅವರು ಒಳಗೊಂದು-ಹೊರಗೊಂದು ಇಲ್ಲದ ವ್ಯಕ್ತಿತ್ವ. ಮಗುವಿನ ಮನಸ್ಸು ಎಂದು ವಿನಯ ಗುರೂಜಿ ಹೊಗಳಿದ್ದಾರೆ
ವಿನಯ ಗುರೂಜಿ ತಮ್ಮ ಆಶ್ರಮದಲ್ಲಿ ಮಳೆಗಾಗಿ ಚಂಡಿಕಾಯಾಗ ಸಂಕಲ್ಪ ಮಾಡಿದರು. ಚಂಡಿಕಾಯಾಗದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಭಾಗವಹಿಸಿದ್ದರು.