ಇನ್ಮುಂದೆ ಆನ್ಲೈನ್ನಲ್ಲಿ ವಿವಾಹ ನೋಂದಣಿ!
– ನೂತನ ವಧು ವರರಿಗೆ ಗುಡ್ ನ್ಯೂಸ್ ನೀಡಿದ ಬಜೆಟ್
– ಅಂಗವಿಕಲರು, ಮಹಿಳೆಯರ ಉದ್ಯೋಗಕ್ಕೂ ಯೋಜನೆ
NAMMUR EXPRESS NEWS
ಬೆಂಗಳೂರು : ರಾಜ್ಯ ಸರಕಾರ ನೂತನ ವಧು-ವರರಿಗೆ ಗುಡ್ನ್ಯೂಸ್ ಕೊಟ್ಟಿದೆ. ಇನ್ಮುಂದೆ ಆನ್ಲೈನ್ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಉಪ ನೊಂದಣಿ ಕಚೇರಿಗಳಲ್ಲಿ ಮಾತ್ರವೇ ವಿವಾಹ ನೋಂದಣಿಯನ್ನು ಮಾಡಲಾಗುತ್ತಿತ್ತು. ಆದರೆ ಇದೀಗ ಹೊಸದಾಗಿ ಕಾವೇರಿ2.0 ತಂತ್ರಾಶದಲ್ಲಿ ಆನ್ ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ್ ಒನ್ ಕೇಂದ್ರಗಳಲ್ಲಿಯೂ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಅಲ್ಲದೇ ವಿಶೇಷ ಚೇತನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢತೆಯನ್ನು ಒದಗಿಸಲು ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು.
ಇದಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಮಹಿಳಾ ಉದ್ಯಮಿಗಳು ಆತಿಥ್ಯ ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ, ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿನ ಆಸಿಡ್ ದಾಳಿ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಇವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023