ಇನ್ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಇ-ಆಫೀಸ್!
– ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾಡಳಿತದ ಹೊಸ ಮೈಲುಗಲ್ಲು!
– ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ
NAMMUR EXPRESS NEWS
ಶಿವಮೊಗ್ಗ: ಆಡಳಿತದಲ್ಲಿ ದಕ್ಷತೆ, ಸ್ಥಿರತೆ ಮತ್ತು ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗಸ್ಟ್ 1ರಿಂದ ಅನ್ವಯಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ- ಆಡಳಿತ ವ್ಯವಸ್ಥೆ ಜಾರಿಗೊಳ್ಳಲಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಿಗೆ ಅನುಕುಲವಾಗುವಂತೆ ವಿನ್ಯಾಸಗೊಳಿಸಿದ ಇ- ಆಡಳಿತ ತಂತ್ರಾಂಶವನ್ನು ಜಿಲ್ಲಾಧಿಕಾರಿ ಸೆಲ್ವಮಣಿ ಉದ್ಘಾಟಿಸಿದರು. ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ. ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೆ ಅವರ ಬೇಡಿಕೆಗಳಿಗನುಗುಣವಾಗಿ ಕಾರ್ಯನಿರ್ವಹಿಸಲು ಇ- ತಂತ್ರಾಂಶ ಸಹಕಾರಿಯಾಗಲಿದೆ. ಕಡತಗಳ ಅನಗತ್ಯ ವಿಳಂಬವನ್ನು ತಪ್ಪಿಸಿ, ಆಡಳಿತದಲ್ಲಿ ಗುಣಮಟ್ಟವನ್ನು ಸುಧಾರಿಸುವಲ್ಲಿ ಪಾರದರ್ಶಕತೆ ಕಂಡುಕೊಂಡು ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ಸ್ಥಾಪಿಸಿ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಲಿದೆ.
ಎಲ್ಲಾ ಅಧಿಕಾರಿಗಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮುದಾಯ ಸಂಪರ್ಕಾಧಿಕಾರಿ ಮೋಹನ್ಕುಮಾರ್, ಇ-ಆಫೀಸ್ ಸಂಪರ್ಕಾಧಿಕಾರಿ ಅನೂಪ್, ಜಿಲ್ಲಾ ನೋಡಲ್ ಅಧಿಕಾರಿ ಸುದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೇಪರ್ ಲೆಸ್ ಆಡಳಿತ.. ಇನ್ನು ದಾಖಲೆ ಪಡೆಯೋದು ಸುಲಭ!
ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ವದ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಇ-ಆಫೀಸ್ ಕಚೇರಿ ವ್ಯವಸ್ಥೆಯು ಸರಳೀಕೃತ, ಸ್ಪಂದಿಸುವ, ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಪಾರದರ್ಶಕ ಕೆಲಸವನ್ನು ಸಾಧಿಸುವ ಮಾಧ್ಯಮವಾಗಿದೆ. ಇ-ಆಫೀಸ್ನ ವೇಗ ಮತ್ತು ದಕ್ಷತೆಯು ಇಲಾಖೆಗಳಿಗೆ ತಿಳುವಳಿಕೆಯುಳ್ಳ ಮತ್ತು ಕ್ಷಿಪ್ರ ನಿರ್ಧಾರಕ್ಕೆ ಸಹಕರಿಸುವುದಲ್ಲದೆ ಬಹುಮುಖ್ಯವಾಗಿ ಅವುಗಳನ್ನು ಕಾಗದ ರಹಿತವಾಗುವಂತೆ ಮಾಡಲಿದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023