ಶಿವಮೊಗ್ಗದ ಎಲ್ಲಾ ತಾಲೂಕಲ್ಲಿ ಸ್ವಾತಂತ್ರ್ಯ ರಂಗು!
– ಜಿಲ್ಲಾ ಕೇಂದ್ರದಲ್ಲಿ ಸಚಿವ ಮಧು ಬಂಗಾರಪ್ಪ ಧ್ವಜಾ ರೋಹಣ
– ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರ, ಭದ್ರಾವತಿ, ಸೊರಬದಲ್ಲಿ ಸಂಭ್ರಮ
NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಸ್ವಾತಂತ್ರ್ಯ ರಂಗು ಕಂಡು ಬಂದಿತು. ಪ್ರತಿ ತಾಲೂಕಲ್ಲಿ ಆಯಾ ತಾಲೂಕು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆ ಪ್ರಮುಖರು, ಸ್ಥಳೀಯ ಶಾಸಕರು ಧ್ವಜಾರೋಹಣ ನೆರವೇರಿಸಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಸಚಿವ ಮಧು ಬಂಗಾರಪ್ಪ ಧ್ವಜಾ ರೋಹಣ ನಡೆಸಿದರು. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರ, ಭದ್ರಾವತಿ, ಸೊರಬದಲ್ಲಿ ಸಂಭ್ರಮದಿಂದ ಎಲ್ಲಾ ಕಡೆ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಅನೇಕರು ಹುತಾತ್ಮ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಧ್ವಜಾರೋಹಣ ನಡೆಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದರು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಸುಭಾಸ್ಚಂದ್ರ ಬೋಸ್, ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ. ಎಂದರು.
ಶಿವಮೊಗ್ಗ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಸ್ವತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ಹೋರಾಟಗಾರರು ನೇಣಿಗೆ ಕೊರಳೊಡ್ಡಿ ಹುತಾತ್ಮರಾಗಿದ್ದು ನಿಜಕ್ಕೂ ನೋವಿನ ಸಂಗತಿ. ಆ ಎಲ್ಲಾ ಹೋರಾಟಗಾರರಿಗೆ ಕೋಟಿ ಕೋಟಿ ನಮನಗಳು. ಶಿವಮೊಗ್ಗ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದ, ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆಯವರಾದ ಶ್ರೀ ಎಸ್. ಬಂಗಾರಪ್ಪನವರು ಸೇರಿದಂತೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ಜಿ ಎಸ್ ಶಿವರುದ್ರಪ್ಪ ಮತ್ತು ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಪ್ರತಿಭಾವಂತರು, ಖ್ಯಾತನಾಮರು ಹುಟ್ಟಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆ ಎಂದರು. ಎಸ್ಪಿ ಮಿಥುನ್ ಕುಮಾರ್, ಜಿಲ್ಲಾಧಿಕಾರಿ ಸೆಲ್ವಮಣಿ ಸೇರಿದಂತೆ ಅನೇಕರು ಇದ್ದರು.
ಶಾರದಾ ಪೂರ್ವ ನಾಯ್ಕ್ ಗೌರವ ವಂದನೆ ಸ್ವೀಕಾರ
ಶಿವಮೊಗ್ಗ ಗ್ರಾಮಾಂತರ ಹೊಳೆಹೊನ್ನುರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಸಕಿ ಶಾರದಾ ಪೂರ್ವ ನಾಯ್ಕ್ ರವರು ಧ್ವಜಾರೋಹಣವನ್ನು ನೆರವೇರಿಸಿ ಶಾಲಾ ಮಕ್ಕಳಿಂದ ಗೌರವ ಮತ್ತು ವಂದನೆಯನ್ನು ಸ್ವೀಕರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.
ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಧ್ವಜಾರೋಹಣ
ಶಾಸಕರಾದ ಗೋಪಾಲಕೃಷ್ಣ ಬೇಳೂರು ರಾಷ್ಟ್ರೀಯ ಹಬ್ಬಗಳ ಸಮಿತಿ ಸಾಗರ ವತಿಯಿಂದ ನೆಹರು ಮೈದಾನದಲ್ಲಿ ನಡೆಸಲಾದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದರು.
ಹೊಸನಗರದಲ್ಲಿ ಸ್ವಾತಂತ್ರ್ಯ ಸಂಭ್ರಮ
ಹೊಸನಗರ ಪಟ್ಟಣದ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು ಎಲ್ಲ ಸರ್ಕಾರಿ ಕಚೇರಿ, ಹೋಟೆಲ್, ಅಂಗಡಿ ಮುಂಗಟ್ಟು, ವಾಹನಗಳ ಹಾಗೂ ಮನೆಗಳ ಮೇಲೆ ತ್ರಿವರ್ಣ ಧ್ವಜ ಕಂಡು ಬಂತು. ಪಟ್ಟಣ ಪಂಚಾಯತ್ ಆವರಣದಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬೀಟೋ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಪಕ್ಷದ ಕಚೇರಿಯಲ್ಲಿ ಸ್ವಾತಂತ್ರೋತ್ಸವ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಎನ್.ರಮೇಶ್, ರವಿಕಮಾರ್, ಚಂದ್ರಭೂಪಾಲ್, ವಿಶ್ವನಾಥ ಕಾಶಿ, ಚಿನ್ನಪ್ಪ, ವಿವಿದ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಕಚೇರಿ: ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ರಾಮಣ್ಣ ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಗಿರೀಶ್ ಪಟೇಲ್, ಎಸ್.ಜ್ಞಾನೇಶ್ವರ್, ರತ್ನಾಕರ ಶೆಣೈ ವಿನ್ಸೆಂಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೆಡಿಎಸ್ ಕಚೇರಿಯಲ್ಲೂ ಆಚರಣೆ ಮಾಡಲಾಯಿತು.