ಶಿವಮೊಗ್ಗದಲ್ಲಿ ಆಪರೇಷನ್ ಕಾಂಗ್ರೆಸ್ ಶುರು!
– ಆಯನೂರು ಮಂಜುನಾಥ್, ನಾಗರಾಜ್ ಗೌಡ ಸೇರಿ ಅನೇಕರು ಕಾಂಗ್ರೆಸ್ ಕಡೆಗೆ
– ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ?.. ಅನೇಕರು ಪಕ್ಷಕ್ಕೆ ಬರ್ತಾರಾ?
NAMMUR EXPRESS NEWS
ಶಿವಮೊಗ್ಗ: ರಾಜ್ಯದಲ್ಲಿ ಲೋಕ ಸಭೆ ಚುನಾವಣೆ ನಡುವೆ ಭಾರೀ ರಾಜಕೀಯ ಜಂಗಿಕುಸ್ತಿ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ನತ್ತ ಸೆಳೆಯಲು ಮುಂದಾಗಿದ್ದು ಶಿವಮೊಗ್ಗದಲ್ಲೂ ಆಪರೇಷನ್ ಹಸ್ತ ಚುರುಕಾಗಿದೆ.
ಆಯನೂರು ಮಂಜುನಾಥ್ ಕಾಂಗ್ರೆಸ್ ಕಡೆ!?
ಮಾಜಿ ಲೋಕಸಭಾ ಸದಸ್ಯ, ಮಾಜಿ ಶಾಸಕ, ಬಿಜೆಪಿ ಪಕ್ಷದಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಇದೀಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅವರು ಕಾಂಗ್ರೆಸ್ ಸೇರುವುದು ಖಚಿತ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ರವಿವಾರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಆಯನೂರು ಕೆಲಹೊತ್ತು ಸಮಾಲೋಚನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸೇರ್ಪಡೆ ವಿಚಾರವೂ ಚರ್ಚೆಯಾಯಿತು. ಎನ್ನಲಾಗಿದೆ. ಬದಲಾದ ಸನ್ನಿವೇಶದಲ್ಲಿ ಮುಂದಿನ ಚುನಾವಣೆ ದೃಷ್ಟಿ ಯಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಕೆಎಸ್ ಈಶ್ವರಪ್ಪನವರ ಜೊತೆಗೆ ಮುನಿಸಿಕೊಂಡು ಈಶ್ವರಪ್ಪನವರ ಮಗನಿಗೆ ಟಿಕೆಟ್ ನೀಡುವುದಾದರೆ ನನಗೆ ಟಿಕೆಟ್ ನೀಡಲಿ ಇಲ್ಲವಾದಲ್ಲಿ ನಾನು ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದಿಟ್ಟವಾದ ನಿರ್ಧಾರ ತೆಗೆದುಕೊಂಡು ಬಿಜೆಪಿ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ನಿಂತು 8 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ಶಿಕಾರಿಪುರದಿಂದ ನಾಗರಾಜ್ ಗೌಡ ಕಾಂಗ್ರೆಸ್ ಪಕ್ಷಕ್ಕೆ
ಶಿಕಾರಿಪುರದಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಗರಾಜ್ ಗೌಡ ಅವರು ಶಿವಮೊಗ್ಗ ಜಿಲ್ಲೆಯ ಯುವ ನಾಯಕರಾಗಿದ್ದು, ಅವರ ಕಾಂಗ್ರೆಸ್ ಸೇರ್ಪಡೆ ಲೋಕ ಸಭಾ ಚುನಾವಣೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ?
ಶಿವಮೊಗ್ಗ ಲೋಕ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಎಂಬ ಕುತೂಹಲ ಮೂಡಿದೆ.ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ ಗೌಡ, ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಹೆಸರು ಚಾಲ್ತಿಯಲ್ಲಿದೆ. ಇನ್ನು ಸೊರಬ ಮಾಜಿ ಶಾಸಕರು ಪಕ್ಷಕ್ಕೆ ಬಂದಲ್ಲಿ ಅವರ ಹೆಸರು ಓಡಾಡುತ್ತಿದೆ.