ವಿವಾಹ, ಸಂತಾನ ಭಾಗ್ಯ ಕರುಣಿಸುವ ನಾಗೇಂದ್ರ ಸ್ವಾಮಿ!
– ನಾಗರಹಳ್ಳಿಯಲ್ಲಿ ಸಂಭ್ರಮದಿಂದ ನಡೆದ ಜಾತ್ರೆ
– ಹೊಸನಗರ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ
NAMMUR EXPRESS NEWS
ಹೊಸನಗರ: ಪುರಾಣ ಪ್ರಸಿದ್ಧ ನಾಗರಹಳ್ಳಿ ಕ್ಷೇತ್ರದ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಜಾತ್ರಾ ಮಹೋತ್ಸವವು ಅದ್ಧೂರಿಯಿಂದ ನೆರವೇರಿತು. ಮಲೆನಾಡಿನ ಪ್ರಸಿದ್ಧ ನಾಗ ದೇಗುಲದಲ್ಲಿ ಒಂದಾದ ನಾಗರಹಳ್ಳಿಯಲ್ಲಿ ಪ್ರತಿ ವರ್ಷ ಈ ಜಾತ್ರೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಮಳೆಗಾಲದ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಾಗೂ ಚಳಿಗಾಲದ ಪುಣ್ಯ ವಾಸದಲ್ಲಿ ಕೂಳೆ ಪಂಚಮಿ ದಿನದಂದು ಅತ್ಯಂತ ಜರುಗುತ್ತವೆ. ನಾಡಿನ ವಿವಿಧ ಮೂಲೆಗಳಿಂದ ದೇಗುಲದ ಭಕ್ತರು ಆಗಮಿಸುತ್ತಾರೆ.
ಸ್ವಾಮಿಯ ದರ್ಶನ ಪಡೆದು, ಸನ್ನಿಧಿಯಲ್ಲಿ ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಹಾಗೂ ಕುಟುಂಬ ರಕ್ಷಣೆಗಾಗಿ ಹರಕೆ ಹೊತ್ತು ತೀರಿಸುವುದು ವಾಡಿಕೆಯಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಈ ಕ್ಷೇತ್ರದಲ್ಲಿ ತಾಲೂಕು ಆಡಳಿತ ಹಾಗೂ ದೇವಸ್ಥಾನ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ಸದಾಕಾಲ ನಾಗರಾಧನೆಯು ನಡೆಯುತ್ತಿದೆ.