ಈ ದೇಗುಲದಲ್ಲಿ ಸ್ಕರ್ಟ್ ಮಿಡಿ, ಪ್ಯಾಂಟ್ ಧರಿಸಂಗಿಲ್ಲ!
-ಚಿಕ್ಕಮಗಳೂರು ದೇವೀರಮ್ಮ ದೇಗುಲದಲ್ಲಿ ನಿಯಮ
– ಕಡೂರಲ್ಲಿ ಹೋರಿ ತಿವಿದು ಓರ್ವ ಸಾವು: ಕೇಸ್
– ಅಜ್ಜಂಪುರ: ಅತ್ತೆ, ಅಳಿಯ ಒಂದೇ ದಿನ ಸಾವು
NAMMUR EXPRESS NEWS
ಪ್ರಸಿದ್ಧ ಚಿಕ್ಕಮಗಳೂರು ದೇವಿರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ. ಇನ್ನು ಮುಂದೆ ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಟೀವ್ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ಗೂ ನೀಷೇಧ ಹೇರಲಾಗಿದೆ.
ಮಲೆನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಈ ದೇವಾಲಯಕ್ಕೆ ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವಿರಮ್ಮನ ಬೆಟ್ಟ ಹತ್ತುತ್ತಾರೆ. ಮಧ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಮಕ್ಕಳಿಂದ ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರೂ ಬರುತ್ತಾರೆ. ಅವರಲ್ಲಿ ಪ್ರೇಮಿಗಳು ಸಹಾ ಇರುತ್ತಾರೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಕೂಡ ನಿಷೇಧ ಮಾಡಲಾಗಿದೆ.
ಎತ್ತು ತಿವಿದು ಯುವ ರೈತ ಸಾವು, ದೂರು ದಾಖಲು
ಯುವ ರೈತನೋರ್ವನನ ಮೇಲೆ ಎತ್ತು ದಾಳಿ ಮಾಡಿ ಬಲಿ ಪಡೆದುಕೊಂಡಿದ್ದು, ಇದೀಗ ಎತ್ತಿನ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಿ. ಸಿದ್ದರಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅರುಣ್ (29) ಮೃತ ದುರ್ದೈವಿ. ಅರುಣ್, ಹೊಲಕ್ಕೆ ತೆರಳುತ್ತಿದ್ದ ವೇಳೆ ಎತ್ತು ಏಕಾಏಕಿ ದಾಳಿ ಮಾಡಿದೆ. ಕೊಂಬಿನಿಂದ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅರುಣ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಗಸ್ಟ್ 21ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಎತ್ತಿನ ಮಾಲೀಕ ಕೃಷ್ಣಪ್ಪ ಎಂಬುವರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ತೆ, ಅಳಿಯ ಒಂದೇ ದಿನ ಸಾವು
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿ ಗ್ರಾಮದಲ್ಲಿ ಅತ್ತೆ ಮತ್ತು ಅಳಿಯ ಒಂದೇ ದಿನ ಮೃತಪಟ್ಟಿದ್ದಾರೆ. ಗ್ರಾಮದ ರಾಮಕ್ಕ (85) ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ಮೃತಪಟ್ಟರು. ಸಂಜೆ 6.30 ರ ವೇಳೆಗೆ ಅವರ ಅಳಿಯ(ಮಗಳ ಗಂಡ) ಫಕೀರಪ್ಪ (68) ತಮ್ಮ ಮನೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ರಾಮಕ್ಕನಿಗೆ ಒಬ್ಬ ಪುತ್ರ, ನಾಲ್ವರು ಪುತ್ರಿಯರಿದ್ದಾರೆ. ಫಕೀರಪ್ಪ ಅವರಿಗೆ ನಾಲ್ವರು ಗಂಡು, ಒಬ್ಬ ಪುತ್ರಿ ಇದ್ದಾರೆ. ಒಂದೇ ದಿನ ಇಬ್ಬರ ಸಾವು ಅವರ ಕುಟುಂಬಸ್ಥರು, ಸಂಬಂಧಿಕರಲ್ಲಿ ಶೋಕ ತರಿಸಿತ್ತು. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಿತು.