ಅಂತೂ ಅರಸಾಳು ನಿಲ್ದಾಣದಲ್ಲಿ ರೈಲು ನಿಲ್ಲುತ್ತೆ!
– ಹೊಸನಗರ, ತೀರ್ಥಹಳ್ಳಿ ಭಾಗದ ಪ್ರಯಾಣಿಕರಿಗೆ ಅನುಕೂಲ
– ಪೂಜೆ ಮಾಡಿ ರೈಲನ್ನು ಸ್ವಾಗತಿಸಿದ ಸ್ಥಳೀಯರು
NAMMUR EXPRESS NEWS
ಹೊಸನಗರ: ಬಹು ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಬೇಡಿಕೆ ಈಗ ಈಡೇರಿದೆ.
ಹೊಸನಗರ, ರಿಪ್ಪನಪೇಟೆ, ಹುಂಚ, ಕೋಣಂದೂರು ಹಾಗೂ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರೂ ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು. ಇದೀಗ ಅರಸಾಳು ಮೂಲಕ ಶಿವಮೊಗ್ಗ, ಬೆಂಗಳೂರು ಸೇರಿ ರಾಜ್ಯದ ಹಲವೆಡೆಗೆ ರೈಲು ಪ್ರಯಾಣ ಮಾಡಬಹುದಾಗಿದೆ. ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈ ವಿಷಯವನ್ನು ಸಂಸದರಾದ ಬಿ.ವೈ ರಾಘವೇಂದ್ರರವರ ಗಮನಕ್ಕೂ ತರಲಾಗಿತ್ತು. ಸಂಸದರ ವಿಶೇಷ ಪ್ರಯತ್ನದಿಂದ ಆ.24ರ ಇಂದಿನಿಂದ (24-08-2023 ) ದಿನ ನಾಲ್ಕು ಮುಖ್ಯ ರೈಲುಗಳು ಅರಸಾಳು ರೈಲು ನಿಲ್ದಾಣದಲ್ಲಿ ನಿಲ್ಲಲಿವೆ.
ಪೂಜೆ ಸಲ್ಲಿಸಿ ಸ್ವಾಗತಿಸಿದ
ಅರಸಾಳು ರೈಲ್ವೆ ನಿಲ್ಧಾಣದಲ್ಲಿ ಪ್ರಪ್ರಥಮವಾಗಿ ನಿಲುಗಡೆಯಾದ ರೈಲಿಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.
ದಶಕಗಳ ಬೇಡಿಕೆ ಈಡೇರಿಸಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ, ಸಂಸದರಾದ ಬಿ.ವೈ ರಾಘವೇಂದ್ರ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲಾಯಿತು. ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ ಯುವ ನಾಯಕ, ಮಾಜಿ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ ಮನವಿ ಮಾಡಿದ್ದಾರೆ.
ಅರಸಾಳಿನಲ್ಲಿ ರೈಲು ನಿಲುಗಡೆ ಶಾಸಕ ಆರಗ ಜ್ಞಾನೇಂದ್ರ ಸಂತಸ
ಬಹಳ ವರ್ಷಗಳ ಬೇಡಿಕೆಯಾಗಿದ್ದ ಅರಸಾಳು ರೈಲು ನಿಲ್ದಾಣ ಸ್ಥಾಪನೆಯಾಗಿ ರೈಲು ನಿಲುಗಡೆ ಗುರುವಾರದಿಂದ ಆರಂಭವಾಗಿದ್ದು,ಶಾಸಕ ಜ್ಞಾನೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ, ಬಹಳ ವರ್ಷಗಳಿಂದ ಈ ನಿಲುಗಡೆಗೆ ಪತ್ರ ಮುಖೇನ ಒತ್ತಾಯಿಸಿದ್ದನ್ನು ನೆನಪಿಸಿಕೊಂಡಿರುವ ಶಾಸಕರು, ತೀರ್ಥಹಳ್ಳಿ ಮತ್ತು ಹುಂಚ ಹೋಬಳಿಯ ಸಾರ್ವಜನಿಕರಿಗೆ ರೈಲು ಸೇವೆ ಹತ್ತಿರವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ, ಅರಸಾಳು ಕುಂಸಿ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಶ್ರಮವಹಿಸಿದ ಸಂಸದ ಬಿ ವೈ ರಾಘವೇಂದ್ರರವರನ್ನು ಶಾಸಕರು ಅಭಿನಂದಿಸಿದ್ದಾರೆ.