- ಗಂಡು ಮಗುವಲ್ಲಿ ಚಿರು ನೋಡುತ್ತಿರುವ ಕುಟುಂಬ
- ಚಿರು ಅಭಿಮಾನಿಗಳು, ಸಿನಿಮಾ ರಂಗದ ಸಂತಸ
ಬೆಂಗಳೂರು: ಕನ್ನಡ ಚಿತ್ರರಂಗದ ಯುವ ನಟ ಚಿರು ಸರ್ಜಾ ಅಕಾಲಿಕ ಮರಣದಿಂದ ನೊಂದಿದ್ದ ಕುಟುಂಬ ಮತ್ತು ಚಿತ್ರರಂಗ ಅವರ ಪತ್ನಿ, ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ಮಗುವಲ್ಲಿ ಚಿರು ನೋಡುತ್ತಿದೆ.
ಮೇಘನಾ ಗುರುವಾರ ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನವರಾತ್ರಿ ಹಬ್ಬದ ದಿನ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಗು ನೋಡಲು ಚಿರುವಿನಂತೆ ಇದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಸಂತೋಷ ವ್ಯಕ್ತಪಡಿಸಿದೆ.
“ನನಗೆ ನನ್ನ ಪತ್ನಿಗೆ ಅಜ್ಜಿ ತಾತನಾಗಿರುವ ಖುಷಿ ಒಂದೆಡೆಯಾದರೆ ಅರ್ಜುನ್ ಸರ್ಜಾ ಮತ್ತು ಅವರ ತಾಯಿಗೆ ಮರಿ ಮೊಮ್ಮಗನನ್ನು ನೋಡಿದ ಸಂತೋಷ. ಎರಡು ಕುಟುಂಬಕ್ಕೆ ಆಗಿರುವ ಖುಷಿಗಿಂತ ಮಿಗಿಲಾದದ್ದು ಕರ್ನಾಟಕ ಜನತೆ, ಪ್ರತಿಯೊಬ್ಬ ಹೆಣ್ಣು ಮಗಳು ಸಂಭ್ರಮಿಸುವ ದಿನವಾಗಿದೆ. ಎಲ್ಲಾ ತಂದೆ ತಾಯಿಯರ ಆಶಿರ್ವಾದ ನಮಗೆ ಬೇಕು ಎಂದು ಮೇಘನಾ ರಾಜ್ ತಂದೆ ನಟ ಸುಂದರ ರಾಜ್ ಹೇಳಿದರು.
ಕನ್ನಡ ಜನತೆ ತುಂಬಾ ಪ್ರೀತಿ ವಿಶ್ವಾಸದಿಂದ ಕಷ್ಟಕಾಲದಲ್ಲಿಯು ನಮ್ಮೊಂದಿಗೆ ನಿಂತುಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಈ ಸಮಯದಲ್ಲಿ ಚಿರು ಇಲ್ಲದಿರುವುದು ತುಂಬಾ ಬೇಸರದ ಸಂಗತಿ. ಆದರೆ ಜೀವನ ಮುಂದೆ ಸಾಗಬೇಕು. ನಮ್ಮ ಜನರ ಪ್ರೀತಿ ವಿಶ್ವಾಸದಿಂದ ಮಾತ್ರ ಅದು ಸಾಧ್ಯವಾಗಿದೆ ಮತ್ತು ಮುಂದೆಯೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅರ್ಜುನ್ ಸರ್ಜಾ, ದ್ರುವ ಸರ್ಜಾ ಸೇರಿದಂತೆ ಇಡೀ ಸರ್ಜಾ ಕುಟುಂಬ ಮಗುವಿನ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದೆ. ಚಿತ್ರರಂಗದ ಅನೇಕ ಗಣ್ಯರೂ ಕೂಡ ಸಂತಸ ಹೇಳಿದ್ದಾರೆ. ಇತ್ತ ಚಿರು ಅಭಿಮಾನಿಗಳು ಕೂಡ ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಒಟ್ಟಿನಲ್ಲಿ ಚಿರು ಸರ್ಜಾ ಮತ್ತು ಮೇಘನಾ ರಾಜ್ ಕುಟುಂಬದಲ್ಲಿ “ಸಂತಸದ ಸಮಯ”ವನ್ನು ಮಗು ತಂದಿದೆ.