- ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ಸಾರ್ಥಕ ಕೆಲಸ
- ರಂಗ ಕಲಾವಿದರು ಅಪ್ಡೇಟ್ ಆಗದಿದ್ದರೆ ಕಷ್ಟ ಕಟ್ಟಿಟ್ಟಬುತ್ತಿ
ವರದಿ: ಮಹೇಂದ್ರ
ಹುಬ್ಬಳ್ಳಿ: ಕರೋನಾ ಮತ್ತು ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಂಗಭೂಮಿ ಕಲಾವಿದರಿಗೆ ನೆರವಾಗಲು ರಂಗಕರ್ಮಿ ಹಾಗೂ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ವೀರ್ ಮುಂದೆ ಬಂದಿದ್ದಾರೆ. ಸರ್ಕಾರ ಕೂಡ ಈ ಕಲಾವಿದರ ನೆರವಿಗೆ ಬರಬೇಕೆಂಬ ಕೂಗಿನ ನಡುವೆ ಸುಷ್ಮಾ ಅವರ ಈ ಹಾದಿ ಕಲಾವಿದರಿಗೆ ಬಲ ತಂದಿದೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜತೆ ಇತ್ತೀಚೆಗೆ ಮಾತನಾಡಿದ ಸುಷ್ಮಾ ಕೋವಿಡ್ನಿಂದಾಗಿ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದಿದೆ. ಅನೇಕರಿಗೆ ಸರ್ಕಾರ ನೆರವಾಗಿದೆ. ಎಲ್ಲರಿಗೂ ಸರ್ಕಾರವೇ ನೆರವಾಗಬೇಕು ಎಂದು ಕಾಯುತ್ತಿದ್ದರೆ ಆಗುವುದಿಲ್ಲ. ಆದ್ದರಿಂದ ಸ್ವಂತ ಖರ್ಚಿನಿಂದ ಕಲಾವಿದರಿಗೆ ನೆರವಾಗುತ್ತಿದ್ದೇನೆ. ರಾಜ್ಯದಲ್ಲಿ 600ರಿಂದ 700 ಕಲಾವಿದರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಅರೋಗ್ಯದ ಸಂಪೂರ್ಣ ಖರ್ಚು ನಾನು ನೋಡಿಕೊಳ್ಳುತ್ತಿದ್ದೇನೆ. ಅವರಿಗೆ ಆರೋಗ್ಯ ಕಾರ್ಡ್ ನೀಡುತ್ತೇವೆ’ ಎಂದಿದ್ದಾರೆ. ಈ ಮೂಲಕ ಎಲ್ಲಾ ಕಲಾವಿದರಿಗೂ ಮಾದರಿಯಾಗಿದ್ದಾರೆ.
ನಾನು ಕೋಟಿ ಕೋಟಿ ಇಟ್ಟಿಲ್ಲ!: ಎಲ್ಲರಿಗೂ ನೆರವು ನೀಡಲು ನಾನು ಕೋಟ್ಯಧಿಪತಿಯಲ್ಲ. ಆದರೆ, ನನ್ನ ಮನೆ (ರಂಗಭೂಮಿ) ಸಂಕಷ್ಟಕ್ಕೆ ಸಿಲುಕಿರುವ ಕಾರಣ ಸಾಧ್ಯವಾದಷ್ಟು ನೆರವಾಗಿ ಮೊದಲು ನನ್ನ ಮನೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕರೋನಾ ವಿರುದ್ಧ ಹೋರಾಟ ಪೂರ್ಣಗೊಳ್ಳುವ ತನಕವಾದರೂ ಬದುಕಿರಲು ಕಲಾವಿದರಿಗೆ ತುರ್ತು ನೆರವು ಅಗತ್ಯವಿದೆ. ಹೀಗಾಗಿ ಅಂತಹ ಕಲಾವಿದರ ನೆರವಿಗೆ ನಿಲ್ಲುತ್ತೇನೆ ಎಂದಿದ್ದಾರೆ.
ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಿ ಸ್ಪರ್ಧೆಗೆ ಅಣಿಯಾಗದೆ ಹೋದರೆ ಈಗಿನ ಸ್ಪರ್ಧೆಯಲ್ಲಿ ರಂಗ ಕಲಾವಿದರು ಉಳಿಯಲು ಸಾಧ್ಯವಿಲ್ಲ. ಈಗಿನ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರುವ ತನಕ ದುಡಿಯುತ್ತಿದ್ದೇನೆ. ಇದಕ್ಕೆ ಸುಷ್ಮಾವೀರ್ ವೀರ ಕಥಾಕೌರ ಥಿಯೇಟರ್ ಕಂಪನಿ ಗುಬ್ಬಿ ಮತ್ತು ದಾವಣಗೆರೆಯ ಕೆಬಿಆರ್ ನಾಟ್ಯ ಸಂಘ ಕೈ ನೆರವಾಗಿವೆ ಎಂದರು. ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ, ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಮತ್ತು ಕಲಾವಿದೆ ಹೆಲನ್ ಮೈಸೂರು ಇದ್ದರು.