ವಿಜಯೇಂದ್ರ ಈಗ “ಮಾಸ್ ಲೀಡರ್”!
ಶಿರಾ ಚುಕ್ಕಾಣಿ..ಮಾಸ್ಟರ್ ಪ್ಲಾನ್ ರೆಡಿ..!
ಆಶೀರ್ವಾದ ಮಾಡಿ ಕಳುಹಿಸಿಕೊಟ್ಟ ಸಿಎಂ
ಶಿರಾ: ತುಮಕೂರು ಜಿಲ್ಲೆ ಶಿರಾ ಉಪ ಕಣ ಇದೀಗ ಹಲವು ರಾಜಕೀಯ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ಹೊಸದಾಗಿ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿರುವ ಡಿಕೆಶಿಗೆ ಪ್ರತಿಷ್ಠೆಯಾದರೇ, ಮತ್ತೊಂದು ಕಡೆ ಯುವ ನಾಯಕ, ಮುಂದಿನ ಯಡಿಯೂರಪ್ಪ ಉತ್ತಾರಾಧಿಕಾರಿ ಎಂದೇ ಕರೆಯಲಾಗುತ್ತಿರುವ ಬಿ.ವೈ.ವಿಜಯೇಂದ್ರ ಇದೀಗ ಶಿರಾ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಜೆಡಿಎಸ್ನಿಂದ ಬಿಜೆಪಿಗೆ ಜಂಪ್ ಆಗಿರುವ ಡಾ.ರಾಜೇಶ ಗೌಡ ಅವರ ಗೆಲುವಿಗಾಗಿ ವಿಜಯೇಂದ್ರ ಇದೀಗ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವಿಜಯ ಪತಾಕೆ ಹಾರಿಸುವುದು ಅಸಾಧ್ಯವೆಂದು ಬಿಜೆಪಿ ಬಹುತೇಕ ಕೈಚೆಲ್ಲಿತ್ತು. ಕಾರಣ, ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರ ಅದಾಗಿತ್ತು. ಆದರೆ, ಅಲ್ಲಿ ನಾರಾಯಣ ಗೌಡ್ರು 9,731 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದಕ್ಕೆ ವಿಜಯೇಂದ್ರ ವರ್ಚಸ್ಸು ಮತ್ತು ಸಂಘಟನೆ ಕಾರಣವಾಗಿತ್ತು.ಆಗ ಖುದ್ದು ಮೋದಿ, ಅಮಿತ್ ಶಾ ಸೇರಿ ರಾಜ್ಯ ನಾಯಕರು ಕೂಡ ಶಹಬ್ಬಾಸ್ಗಿರಿ ನೀಡಿದ್ದರು.
ಕೆ.ಆರ್.ಪೇಟೆಯಲ್ಲಿ ಬಿಜೆಪಿ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಡಿಸಿಎಂ ಡಾ.ಅಶ್ವಥ್ ನಾರಾಯಣ ಮತ್ತು ಸಿ.ಪಿ.ಯೋಗೇಶ್ವರ್ ಜತೆ ಬಿ.ವೈ.ವಿಜಯೇಂದ್ರರವರ ಪ್ಲ್ಯಾನ್ ಗೆದ್ದಿತ್ತು.ವಿಜಯೇಂದ್ರಗೆ ಬಿಜೆಪಿ ದೆಹಲಿ ಮಟ್ಟದಲ್ಲಿ ಉತ್ತಮ ಹೆಸರು ತಂದು ಕೊಡುವುದರ ಜತೆಗೆ ರಾಜ್ಯ ಮಟ್ಟದಲ್ಲೂ ವಿಜಯೇಂದ್ರ ತನ್ನ ಪ್ರಬಾವವನ್ನು ಹೆಚ್ಚಿಸಿಕೊಂಡಿದ್ದರು. ಈಗ, ಮತ್ತೆರಡು ಕ್ಷೇತ್ರಗಳ ಉಪಚುನಾವಣೆ ಎದುರಾಗಿದೆ. ಅದರಲ್ಲಿ ಒಂದು, ಹೇಗೆ ಕೆ.ಆರ್.ಪೇಟೆಯೋ, ಹಾಗೆಯೇ ಬಿಜೆಪಿಗೆ ನೆಲೆಯಿಲ್ಲದ ತುಮಕೂರು ಜಿಲ್ಲೆಯ ಶಿರಾ ಚುನಾವಣೆ.
70ವರ್ಷಗಳ ಬಳಿಕೆ ಶಿರಾದಲ್ಲಿ ಬಿಜೆಪಿ ಪತಾಕೆಯನ್ನು ಹಾರಿಸುತ್ತೇವೆ ಎಂದು ಘೋಷಿಸಿರುವ ವಿಜಯೇಂದ್ರ ಈಗಾಗಲೇ ಆಖಾಡಕ್ಕೆ ಇಳಿದಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯಕ್ಕೆ ವಿಜಯೇಂದ್ರ ಎಂಟ್ರಿ ನಿದ್ದೆಗೆಡಿಸಿದೆ. ಯುವಕರನ್ನು ಸೆಳೆಯುವಲ್ಲಿ ವಿಜಯೇಂದ್ರ ಮುಂದಾಗಿರುವುದು ಒಂದು ಕಡೆ. ನಮ್ಮದೇ ಸರಕಾರವಿದೆ ಎಂದು ಕ್ಷೇತ್ರದ ಅಭಿವೃದ್ದಿಯ ವಿಚಾರವನ್ನು ಮುನ್ನಲೆಗೆ ತರುತ್ತಿರುವುದು ಇನ್ನೊಂದು ಕಡೆ. ಇದರ ಜೊತೆಗೆ, ಆಡಳಿತ ಯಂತ್ರದ ಉಪಯೋಗವನ್ನು ಪಡೆದುಕೊಳ್ಳು ಜೊತೆಗೆ ದಶಕಗಳಿಂದ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್-ಜೆಡಿಎಸ್ಸಿನ ನೆಟವರ್ಕ್ ಕಟ್ ಮಾಡಲು ಪ್ಲಾನ್ ಮಾಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ವಿಜಯೇಂದ್ರ ಶಕೆ ಶುರುವಾಗಲಿದೆ.