ರಾಜಧಾನಿಯಲ್ಲಿ ರಾಘವೇಂದ್ರಗೆ ಜೈ ಹೋ!
– ಪ್ರತಿ ನಾಯಕರಿಂದಲೂ ರಾಘವೇಂದ್ರ ಅವರಿಗೆ ಜಯಘೋಷ
– ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ
– -ಈಶ್ವರಪ್ಪ ವಿರುದ್ದ ನಾಯಕರ ಅಸಮಾಧಾನ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗರ ಸಭೆ ಭಾನುವಾರ ಅರಮನೆ ಮೈದಾನದ ವೈಟ್ ಪೆಟಲ್ಸ್ ಅಲ್ಲಿ ಬಿಜೆಪಿ ಬೆಂಗಳೂರಿಗರ ಸಮಾವೇಶ ನಡೆಯಿತು. ಲೋಕಸಭೆ ಚುನಾವಣೆ ನಿಮ್ಮ ರಾಘಣ್ಣನನ್ನು ಸಂಸದನಾಗಿ ಗೆಲ್ಲಿಸುವುದಕ್ಕಲ್ಲ. ಬದಲಾಗಿ ಅಖಂಡ ಭಾರತದ ರಕ್ಷಣೆಗಾಗಿ ಬಿಜೆಪಿ ಗೆಲ್ಲಿಸಬೇಕಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಅಗುವುದೂ ಅಷ್ಟೇ ಸತ್ಯ. ಮೋದಿ ಅವರು ಪ್ರಧಾನಿ ಆಗುತ್ತಿದ್ದಂತೆ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ವಾಪಸ್ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 75 ವರ್ಷವೂ ಜನರು ತೆರಿಗೆ ಕಟ್ಟುತ್ತಿದ್ದರು. ಇಂದೂ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಈಗ ಆಗುತ್ತಿರುವ ಅಭಿವೃದ್ಧಿ ಕೆಲಸಗಳು ಈ ಹಿಂದೆ ಯಾಕೆ ಆಗಲಿಲ್ಲ? ಕಳೆದ 10 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಭಾರತ ಸೂಪರ್ ಪವರ್ ಆಗಿದೆ ಎಂದರು.
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳು ಬೇಸರ ಮೂಡಿಸಿದರೂ ನನಗೆ ಆಶೀರ್ವಾದ ಎಂದುಕೊಂಡಿದ್ದೇನೆ. ಅವರು ಏಕೆ ಸ್ಪರ್ಧೆ ಮಾಡಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಎರಡು ವಾರದ ಹಿಂದಷ್ಟೇ ನನ್ನ ಗೆಲುವು ನಿಶ್ಚಿತ ಎಂದಿದ್ದರು. ಆದರೆ ಇದೀಗ ನನ್ನ ಕುಟುಂಬದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದಾರೆ. ಅವರು ಹಿರಿಯರಿದ್ದಾರೆ. ನಾನೂ ಅವರಷ್ಟೇ ಕಟುವಾಗಿ ಮಾತನಾಡಬಹುದು. ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು. ಬಿಜೆಪಿಯ ಪ್ರತಿ ಕಾರ್ಯಕರ್ತ 10 ವರ್ಷದ ಟ್ರ್ಯಾಕ್ ರೆಕಾರ್ಡ್ನೊಂದಿಗೆ ಪ್ರಜ್ಞಾವಂತ ಮತದಾರರ ಮುಂದೆ ಹೋಗುತ್ತಿದ್ದಾನೆ. ನರೇಂದ್ರ ಮೋದಿ ಅವರು ಕೇವಲ ಭಾಷಣ ಮಾಡುವ ಪ್ರಧಾನಿಯಲ್ಲ. ನುಡಿದಂತೆ ನಡೆದಿದ್ದಾರೆ. ಆಟೋಮೊಬೈಲ್, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರದಲ್ಲಿ ಭಾರತವನ್ನು ಗ್ಲೋಬಲ್ ಹಬ್ ಆಗಿ ಪರಿವರ್ತನೆ ಆಗುವ ಕನಸನ್ನು ಮೋದಿ ಕಂಡಿದ್ದಾರೆ ಎಂದು ರಾಘವೇಂದ್ರ ಹೇಳಿದರು.
ಪಕ್ಷ ಮತ್ತೊಮ್ಮೆ ಸ್ಪರ್ಧೆ ಮಾಡುವ ಅವಕಾಶ ಕೊಟ್ಟಿದೆ. ನನ್ನ ಸುದೈವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಬಲ ನೀಡಿರುವುದು ನನಗೆ ಆನೆಬಲ ಬಂದಂತಾಗಿದೆ ಎಂದರು. ಶಾಸಕ ಗುರುರಾಜ್ ಗಂಟೆಹೊಳೆ, ಎಸ್. ಎಸ್.ರುದ್ರೇಗೌಡ, ಡಿ.ಎಸ್. ಎನ್.ಚನ್ನಬಸಪ್ಪ, ಎಂಎಲ್ಸಿ ಅರುಣ್, ಭಾರತಿ ಶೆಟ್ಟಿ, ಮಾಜಿ ಶಾಸಕರಾದ ಹಾಲಪ್ಪ, ಕೆ.ಬಿ.ಅಶೋಕಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಕೆ.ಜಿ.ಕುಮಾರಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ಲಕ್ಷ್ಮೀನಾರಾಯಣಸ್ವಾಮಿ, ಪ್ರವೀಣ್ ಶೆಟ್ಟಿ, ಪರುಶುರಾಮ್, ಉಮೇಶ್ ಶೆಟ್ಟಿ, ಡಾ. ಧನಂಜಯ ಸರ್ಜಿ, ಶಿವಾನಂದ ಶೆಟ್ಟಿ, ನವೀನ್ ಹೆದ್ದೂರು, ರಾಘವೇಂದ್ರ ಬಾಳೆಬೈಲು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಆರಗ ದನಿ
ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಜಾರಿಗೆ ತರಲು, ಪ್ರಜಾಪ್ರಭುತ್ವ ಉಳಿವಿಗಾಗಿ ಬಿಜೆಪಿಗೆ ಮತ ಕೊಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು. ಇದು ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲ. ರಾಷ್ಟ್ರದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ರಾಷ್ಟ್ರಮಟ್ಟದ ಚರ್ಚೆಗಳು ನಡೆಯಬೇಕಿತ್ತು. ದುರ್ದೈವ ಕಾಂಗ್ರೆಸ್ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಸಿದ್ಧವಿಲ್ಲ. 75 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ದೇಶವನ್ನು ಹಿಂಡಿ ಹಿಪ್ಪೆ ಮಾಡಿದೆ. ಹಾಗಾಗಿ ದೇಶದಲ್ಲಿ ಶಾಂತಿ ಕಾಪಾಡಬೇಕು. ಅದಕ್ಕೆ ಬಿಜೆಪಿಯನ್ನು ಗೆಲ್ಲಿಸಬೇಕು. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಹದಗೆಟ್ಟಿದೆ. ರಾಘವೇಂದ್ರ ಅವರಿಗೆ ನೀವು ಮತ ನೀಡೋದು ಮೋದಿ ಅವರಿಗೆ ಮತ ನೀಡಿದಂತೆ ಎಂದು ಆರೋಪಿಸಿದರು.
ದೇಶದ ಮಾದರಿ ಸಂಸದ ರಾಘವೇಂದ್ರ: ವಿಜಯೇಂದ್ರ
ಸಹೋದರ ಬಿ.ವೈ.ರಾಘವೇಂದ್ರ ಅವರು ಕ್ರಿಯಾಶೀಲ ಸಂಸದರಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗಿಂತ 10 ಹೆಜ್ಜೆ ಮುಂದೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ದೇಶದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿದ 2ನೇ ಸಂಸದ ಎಂಬ ಶ್ರೇಯ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ಮೂರು ಬಾರಿ ಸಂಸದರಾಗಿ ಶಿವಮೊಗ್ಗದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡಿದ್ದಾರೆ. ಶಿವಮೊಗ್ಗ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದು ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಸಂಸತ್ಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.