ಪಡಿತರ ಚೀಟಿ ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ?
– ಅನೇಕರ ಪಡಿತರ ಚೀಟಿ ಬಚಾವ್ ಆಗುತ್ತಾ?
– ವಿಧಾನಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಸುಳಿವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಪಡಿತರ ಚೀಟಿಗಳನ್ನು (PHH/BPL) ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಪಡಿತರ ಚೀಟಿ ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅನೇಕರ ಪಡಿತರ ಚೀಟಿ ಬಚಾವ್ ಆಗುತ್ತಾ?. ವಿಧಾನಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಸುಳಿವು ನೀಡಿದ್ದಾರೆ.
ಹೌದು. ಗುರುವಾರ ವಿಧಾನಸಭೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ವಿಷಯವನ್ನು ತಿಳಿಸಿದರು. ಪ್ರಸ್ತುತ ಜಾರಿಯಲ್ಲಿರುವ 1.2 ಲಕ್ಷ ರೂಪಾಯಿಗಳ ಆದಾಯ ಮಿತಿಯನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈಗಿನ ಆದಾಯ ಮಿತಿಯನ್ನು 2017ರಲ್ಲಿ ನಿಗದಿಪಡಿಸಲಾಗಿತ್ತು ಮತ್ತು ಕಳೆದ ಒಂಬತ್ತು ವರ್ಷಗಳಲ್ಲಿ ಜೀವನ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಈ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಸಲು ಶಿಫಾರಸು ಮಾಡಿದೆ.
ಈ ಶಿಫಾರಸನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ದಿನೇಶ್ ಗುಂಡೂರಾವ್ ಅವರು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ಪರವಾಗಿ ಸದನಕ್ಕೆ ಮಾಹಿತಿ ನೀಡಿದರು. ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನಿರ್ವಹಣಾ ವೆಚ್ಚ ಅಧಿಕವಾಗಿರುವುದರಿಂದ ಆದಾಯದ ಮಿತಿಯನ್ನು ಹೆಚ್ಚಿಸಲೇಬೇಕು ಎಂದು ಅಶ್ವತ್ಥ ನಾರಾಯಣ್ ಆಗ್ರಹಿಸಿದರು. ಆಹಾರ ಭದ್ರತಾ ಕಾಯಿದೆಯಡಿ ಶೇ. 50ರಷ್ಟು ನಗರ ಜನಸಂಖ್ಯೆಗೆ ಪಡಿತರ ಚೀಟಿ ಸಿಗಬೇಕು ಎಂಬ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ನಿಯಮವು ಇಡೀ ದೇಶಕ್ಕೆ ಅನ್ವಯಿಸುತ್ತದೆಯೇ ಹೊರತು ರಾಜ್ಯವಾರು ಅಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿಗಿಂತಲೂ ಅಂದರೆ ಸುಮಾರು 15.8 ಲಕ್ಷದಷ್ಟು ಹೆಚ್ಚಿನ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಾಗಿದೆ ಎಂದು ಅವರು ವಿವರಿಸಿದರು. ಪಡಿತರ ಚೀಟಿಯು ಕೇವಲ ಆಹಾರ ಧಾನ್ಯಗಳಿಗಷ್ಟೇ ಸೀಮಿತವಾಗದೆ ಆರೋಗ್ಯ ವಿಮೆ ಸೇರಿದಂತೆ ಹತ್ತಾರು ಸರ್ಕಾರಿ ಸೌಲಭ್ಯಗಳಿಗೆ ಮೂಲ ದಾಖಲೆಯಾಗಿರುವುದರಿಂದ ಅದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಅನರ್ಹರು ಕೂಡ ಪಡಿತರ ಚೀಟಿಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ಸಚಿವರು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ಆದಾಯ ಮಿತಿ ಪರಿಷ್ಕರಣೆಯಾದಲ್ಲಿ ಮಧ್ಯಮ ವರ್ಗದ ಅನೇಕ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ದೊರೆಯುವ ಸಾಧ್ಯತೆಯಿದೆ.








