ಮುರೊಳ್ಳಿಗೆ ಟಿಕೆಟ್ ನೀಡುವಂತೆ ಸಿಎಂಗೆ ಪಟ್ಟು!
– ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ
– 50ಕ್ಕೂ ಹೆಚ್ಚು ಮಂದಿಯ ನಿಯೋಗದಿಂದ ಒತ್ತಾಯ
NAMMUR EXPRESS NEWS
ಬೆಂಗಳೂರು/ಶೃಂಗೇರಿ: ಕಾಂಗ್ರೆಸ್ ಮುಖಂಡ ಸುಧೀರ್ ಮುರೊಳ್ಳಿ ಅವರಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಯೋಗದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಕಿಮ್ಮನೆ ರತ್ನಾಕರ, ವಿನಯ್ ಕುಮಾರ್ ಸೊರಕೆ, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ, ಉಡುಪಿಯ ರಮೇಶ್ ಕಾಂಚನ್, ಕುಂದಾಪುರದ ದಿನೇಶ್ ಹೆಗಡೆ, ಉಡುಪಿಯ ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸೌರವ್ ಬಲ್ಲಾಳ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಮಾ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯ ನಿಯೋಗ ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆ ಅವರು ಇತ್ತೀಚೆಗೆ ತಮ್ಮ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳಿದ್ದು. ಹೆಗಡೆಯವರಿಗೆ ಟಿಕೆಟ್ ನೀಡಲು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ ಎಂದು ನಿಯೋಗ ಸಿಎಂ ಗಮನಕ್ಕೆ ತಂದಿತು. ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಅಭ್ಯರ್ಥಿಗಳ ವಿಷಯವಾಗಿ ಒಂದಿಷ್ಟು ಗೊಂದಲಗಳಿದ್ದು, ಜಯಪ್ರಕಾಶ್ ಹೆಗಡೆಯವರು ಬಿಜೆಪಿ, ಕಾಂಗ್ರೆಸ್ ನಲ್ಲೂ ಸ್ಪರ್ಧಿಸುವುದಾಗಿ ಸುದ್ದಿ ಹರಡಿ ಗೊಂದಲ ಮೂಡುತ್ತಿದೆ.
ಅವರನ್ನು ಸೇರಿಸಿಕೊಳ್ಳುವುದಾದರೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಮಾಡುವುದು ಸರಿಯಲ್ಲ. ಪಕ್ಷ ನಿಷ್ಠರಿಗೆ ಹಾಗೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ನಿಯೋಗವು ಸಿಎಂ ಅವರನ್ನು ಒತ್ತಾಯಿಸಿದರು. ವಲಸಿಗ ನಾಯಕರಿಗೆ ಮಣೆ ಹಾಕಿದರೆ ಪಕ್ಷ ನಿಷ್ಠರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಕಾಂಗ್ರೆಸ್, ಪಕ್ಷದ ಸಿದ್ಧಾಂತ, ವೈಚಾರಿಕತೆ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇಟ್ಟವರನ್ನು ಪರಿಗಣಿಸಬೇಕು ಎಂದು ನಿಯೋಗದ ಸ್ಥಳೀಯ ನಾಯಕರು ಮನವಿ ಮಾಡಿದ್ದಾರೆ.