ಕೆ ಆರ್ ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಸವಾರ ಬಲಿ
– ಪಕ್ಷದ ವತಿಯಿಂದ ಕುಟುಂಬಕ್ಕೆ ಪರಿಹಾರ
– ಶೋಭಾ ಕರಂದ್ಲಾಜೆ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ
NAMMUR EXPRESS NEWS
ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಿಗೆ ಸವಾರನೊಬ್ಬ ಬಲಿಯಾಗಿದ್ದಾನೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ಅಪಘಾತ ಸಂಭವಿಸಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್ನಲ್ಲಿ ಬಂದ ಪ್ರಕಾಶ್ ಗುದ್ದಿ ಕೆಳಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್ ಮೇಲೆ ಖಾಸಗಿ ಬಸ್ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಪ್ರಕಾಶ್ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್ ತೆರೆಯುವಾಗ ಬೈಕ್ನಲ್ಲಿ ಬಂದು ಗುದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಸ್ ಹರಿದಿದೆ. ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗುವುದು. ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ, ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ ಎಂದರು. ಶೋಭಾ ಕರಂದ್ಲಾಜೆ, ಶಾಸಕ ಭೈರತಿ ಬಸವರಾಜು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.