3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಪ್ರವಾಸಿಗರಿಗೆ ನಿಷೇಧ..!
– ಹುಲಿ ಉಗುರು ಪ್ರಕರಣಕ್ಕೆ ಅರಣ್ಯ ಅಧಿಕಾರಿ ವಿರುದ್ಧ ದೂರು
NAMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡ ಪ್ರವಾಸಿ ತಾಣ ಮುಳ್ಳಯ್ಯನಗಿರಿ ದತ್ತಪೀಠ ಭಾಗಕ್ಕೆ 3 ದಿನಗಳ ಕಾಲ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ದತ್ತಮಾಲಾ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ 3 ದಿನ ಗಿರಿ ಭಾಗ ಬಂದ್ ಮಾಡಲಾಗಿದೆ. ನವೆಂಬರ್ 4 ಬೆಳಗ್ಗೆ 6 ಗಂಟೆಯಿಂದ ನವೆಂಬರ್ 6ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ಮಾಣಿಕ್ಯಾಧಾರ, ಗಾಳಿಕೆರೆಗೂ ಪ್ರವಾಸ ನಿಷೇಧಿಸಲಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೆ ಮುಳ್ಳಯ್ಯನಗಿರಿ ಭಾಗದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿಷೇಧ ಹೇರಲಾಗಿದೆ. ದತ್ತಪೀಠಕ್ಕೆ ಡಿಸಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಉಗುರು: ಅರಣ್ಯ ಅಧಿಕಾರಿ ವಿರುದ್ಧ ಕೇಸ್!
ಅಲ್ದುರು: ಹುಲಿ ಉಗುರಿನ ಲಾಕೆಟ್ ಹೊಂದಿರುವ ಆರೋಪದಲ್ಲಿ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ಕುಮಾರ್ ಎಂ. ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಅರೇನೂರಿನ ಸುಪ್ರಿತ್ ಮತ್ತು ಅಬ್ದುಲ್ ಖಾದರ್ ಎಂಬವರು ಆಲ್ಲೂರು ವಲಯ ಅರಣ್ಯಾಧಿಕಾರಿಗೆ ಗುರುವಾರ ದೂರು ನೀಡಿದ್ದಾರೆ. ‘ಹುಲಿ ಉಗುರು ಒಳಗೊಂಡ ಚಿನ್ನದ ಸರ ಧರಿಸಿರುವ ಚಿತ್ರವನ್ನು ದರ್ಶನ್ಕುಮಾರ್ ಅವರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಎಲ್ಲರ ವಿರುದ್ಧ ದೂರು ದಾಖಲಾಗುತ್ತಿರುವುದರಿಂದ ಚಿತ್ರವನ್ನು ತಮ್ಮ ಖಾತೆಗಳಿಂದ ಅಳಿಸಿದ್ದಾರೆ. ಸೈಬರ್ ಅಪರಾಧ ಪೊಲೀಸರ ಮೂಲಕ ಚಿತ್ರವನ್ನು ಮತ್ತೆ ಪಡೆದು ದರ್ಶನ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಹುಲಿ ಉಗುರು ಧರಿಸಿರುವ ಆರೋಪದ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ದರ್ಶನ್ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಬೇರೆ ಊರಿನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಅವರು ಹುಲಿ ಉಗುರಿನ ಲಾಕೆಟ್ ಹೊಂದಿರುವುದು ಖಚಿತವಾದರೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’
ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದ್ದಾರೆ.