ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ
– ದತ್ತಮಾಲಾ ಅಭಿಯಾನ ಹಿನ್ನೆಲೆ: ಎಲ್ಲೆಡೆ ಹೈ ಅಲರ್ಟ್
– ನ.4,5,6ಕ್ಕೆ ಪ್ರವಾಸಿಗರ ನಿರ್ಬಂಧ: ಬಂದವರು ವಾಪಸ್
NAMMUR EXPRESS NEWS
ಚಿಕ್ಕಮಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ದತ್ತಮಾಲಾ ಅಭಿಯಾನ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಂದ್ರದ್ರೋಣ ಪವರ್ತದ ಸಾಲಿನ ಪ್ರವಾಸಿತಾಣಗಳಿಗೆ ಮೂರು ದಿನ ನಿರ್ಬಂಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಕೈಮರ ಚೆಕ್ ಪೋಸ್ಟ್ ಬಳಿ ವಾಹನ ತಡೆದು ವಾಪಸ್ ಕಳಿಸಲಾಗುತ್ತಿದೆ. ವೀಕೆಂಡ್ ಹಿನ್ನೆಲೆ ಸಾವಿರಾರು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಬಂದಿದ್ದಾರೆ. ಸದ್ಯ ನಿರ್ಬಂಧ ಹಿನ್ನೆಲೆ ಪ್ರವಾಸಿಗರನ್ನು ವಾಪಸ್ ಕಳಿಸಲಾಗುತ್ತಿದೆ.
ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ 20ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಮಾಲಾಧಾರಿಗಳಾಗಿ, 7 ದಿನಗಳ ಕಾಲ ವ್ರತಾಚರಣೆಯಲ್ಲಿದ್ದು, ನವೆಂಬರ್ 5ರಂದು ದತ್ತಪೀಠದಲ್ಲಿ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ನಾಗಸಾಧು ಕೂಡ ಆಗಮಿಸಲಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಪೊಲೀಸ್ ಇಲಾಖೆ ಕೂಡ ದತ್ತಪೀಠ ಹಾಗೂ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಮುಂಜಾಗೃತ ಕ್ರಮವಾಗಿ ಎಸ್ಪಿ ವಿಕ್ರಂ ದತ್ತಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನವೆಂಬರ್ 4ರಿಂದ 6ರವರೆಗೂ ಚಂದ್ರದ್ರೋಣ ಪವರ್ತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರನ್ನ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧ ವಿಧಿಸಿದೆ.
ಬಂದವರು ವಾಪಾಸ್!
ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಕ್ಕೆ ಬಂದವರನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿರುವ ದೃಶ್ಯ ಶನಿವಾರ ಎಲ್ಲೆಡೆ ಕಂಡು ಬಂತು. ಚಂದ್ರದ್ರೋಣ ಪವರ್ತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಅವರನ್ನು ಪೊಲೀಸರು ತಡೆದು ವಾಪಾಸ್ ಕಳುಹಿಸಿದ್ದಾರೆ. ಹೀಗಾಗಿ ಪ್ರವಾಸಿಗರು ಹೊರನಾಡು, ಆಗುಂಬೆ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಕರಾವಳಿ ಕಡೆ ಪಯಣ ಬೆಳೆಸಿದ್ದಾರೆ.