ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ.!
– ಬೀಗ ಒಡೆದು ದೇಗುಲ ಪ್ರವೇಶ ಮಾಡಿದ ದಲಿತ ಮುಖಂಡರು!
– ಚಿಕ್ಕಮಗಳೂರಿನಲ್ಲಿ ನಡೆದ ಘಟನೆ!
NAMMUR EXPRESS NEWS
ಚಿಕ್ಕಮಗಳೂರು: ಗೊಲ್ಲರಹಟ್ಟಿ ನಿವಾಸಿಗಳಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ, ಇದೀಗ ದೇವಾಲಯದ ಬೀಗ ಒಡೆದು ಒಳಗೆ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಗೊಲ್ಲರಹಟ್ಟಿ ಗ್ರಾಮಸ್ಥರ ವಿರೋಧದ ನಡುವೆಯೂ ತಹಸೀಲ್ದಾರ್ ರಾಜೀವ್ ನೇತೃತ್ವದಲ್ಲಿ ನೂರಾರು ದಲಿತರು, ರಂಗನಾಥ ಸ್ವಾಮಿ ದೇವಾಲಯ ಪ್ರವೇಶಿಸಿದರು. ನಂತರ ಹಲ್ಲೆಗೊಳಗಾಗಿದ್ದ ಯುವಕ ಸೇರಿ ದಲಿತ ಯುವಕರು ಗರ್ಭಗುಡಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ಏನಿದು ಪ್ರಕರಣ:
ಜನವರಿ 1 ರಂದು ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಜೆಸಿಬಿ ಕೆಲಸಕ್ಕೆಂದು ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ದಲಿತ ವ್ಯಕ್ತಿ ಆಗಮನದಿಂದ ದೇವರಿಗೆ ಮೈಲಿಗೆಯಾಗಿದೆ ಎಂದು ಗ್ರಾಮಸ್ಥರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ದೇವರಿಗೆ ಮೈಲಿಗೆ ಆಗಿದೆ ಎಂದು ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಆದರೆ, ಅದೇ ಯುವಕ ಈಗ ದೇವರಿಗೆ ಪೂಜೆ ಮಾಡಿದ್ದಾನೆ. ಗ್ರಾಮಸ್ಥರು ಬೀಗದ ಕೈ ನೀಡದ ಹಿನ್ನೆಲೆಯಲ್ಲಿ ದ್ವಾರ ಬಾಗಿಲು, ಗರ್ಭಗುಡಿ ಬೀಗ ಒಡೆದು ದಲಿತ ಮುಖಂಡರು ದೇವರ ದರ್ಶನ ಪಡೆದರು. ಪೂಜೆ ಬಳಿಕ ಗರ್ಭಗುಡಿ, ದ್ವಾರಬಾಗಿಲನ್ನು ಅಧಿಕಾರಿಗಳು ಮುಚ್ಚಿಸಿದರು. ಇದೇ ವೇಳೆ ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ, ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಗ್ರಾಮಸ್ಥರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪೂಜೆ ಮಾಡಿದ್ದು ಸಂತೋಷ ತಂದಿದೆ:
30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನ ನಾನು ದ್ವೇಷ ಮಾಡಲ್ಯ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದಿದ್ದರು, ನೋವು ಮಾಡಿದ್ದರು. ಇಂದು ನಾನು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ಇವತ್ತು ನನಗೆ ನೆಮ್ಮದಿ ಆಗಿದೆ. ಭಗವಂತ ಅವರಿಗೆ, ನಮಗೆ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ಪೂಜೆ ಬಳಿಕ ಹೇಳಿದ್ದಾರೆ.