ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ!
– ಪೂಜಜೆ ಮಾಡಿ ಶೃಂಗೇರಿಯಿಂದ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು
NAMMUR EXPRESS NEWS
ಚಿಕ್ಕಮಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ ಆರಾಧ್ಯ ಮೂರ್ತಿ ಬಾಲಕ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಸಮರ್ಪಿಸಲಾಗುತ್ತಿದೆ. ಬೆಂಗಳೂರು ಮೂಲದ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು-ಬಾಣ ಸಮರ್ಪಣೆ ಮಾಡುತ್ತಿದ್ದು, ಅದಕ್ಕೂ ಮೊದಲು ಶೃಂಗೇರಿಯ ಶಾರದಾ ಪೀಠದಲ್ಲಿ ಶ್ರೀ ಗುರುಗಳ ಮುಂದೆ ಅದನ್ನು ಪ್ರದರ್ಶಿಸಿದರು. ಅತ್ಯಂತ ಸುಂದರ ಹಾಗೂ ಮನಮೋಹಕವಾದ, ಬೆಳ್ಳಿಯಿಂದ ಮಾಡಲಾದ ಈ ಬಿಲ್ಲು-ಬಾಣವನ್ನು ಶೃಂಗೇರಿ ಹಿರಿಯ ಹಾಗೂ ಕಿರಿಯ ಶ್ರೀಗಳು ಪೂಜಿಸಿ ಕಳಿಸಿಕೊಟ್ಟರು. ಶೃಂಗೇರಿ ಹಿರಿಯ ಶ್ರೀಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದು, ಬೆಳ್ಳಿಯ ಬಿಲ್ಲು- ಬಾಣದ ಅಂದಚಂದವನ್ನು ಸವಿದರು. ನಂತರ ಅದನ್ನು ಅಯೋಧ್ಯೆಗೆ ಕೊಂಡೊಯ್ಯಲಾಯಿತು. ರಾಮ ಮಂದಿರದ ಪ್ರತಿಷ್ಠಾಪನೆಗೆ ಶೃಂಗೇರಿ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಶ್ರೀಗಳು ಶುಭಹಾರೈಕೆಯ ಸಂದೇಶವನ್ನು ಕಳಿಸಿಕೊಟ್ಟಿದ್ದರಲ್ಲದೆ, ಆ ದಿನ ಮಠದಲ್ಲಿ ಹಾಗೂ ಶಾಖಾಮಠಗಳಲ್ಲಿ ಶ್ರೀರಾಮನ ಆರಾಧನೆಗೆ ನಿರ್ದೇಶನ ನೀಡಿದ್ದರು.
ಚಿನ್ನದ ಬಿಲ್ಲು ಬಾಣ!
ಪ್ರಸ್ತುತ ಅಯೋಧ್ಯಾ ರಾಮನ ಕೈಯಲ್ಲಿ ಚಿನ್ನದ ಬಿಲ್ಲು ಬಾಣ ಇವೆ. ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನವೇ ಹಲವು ಅಮೂಲ್ಯ ಉಡುಗೊರೆಗಳು ಅಯೋಧ್ಯೆಯನ್ನು ತಲುಪಿದ್ದವು. ದೇಶಾದ್ಯಂತ ಹಲವು ಭಕ್ತರು ಅನೇಕ ಉಡುಗೊರೆಗಳನ್ನು ಶ್ರೀರಾಮನಿಗಾಗಿ ಅಯೋಧ್ಯೆಗೆ ಕಳಿಸಿದ್ದರು. ಅತ್ತ ನೇಪಾಳದಿಂದಲೂ ಅತ್ಯಮೂಲ್ಯ ವಸ್ತುಗಳು ಅಯೋಧ್ಯೆ ಸೇರಿದ್ದವು. ಇದೀಗ ಮಲೆನಾಡಿನ ಈ ಬಿಲ್ಲು ಬಾಣ ಗಮನ ಸೆಳೆದಿದೆ.