ಅಯೋಧ್ಯೆ ಸಂಭ್ರಮದಲ್ಲಿ ಕಾಫಿನಾಡು!
– ಶೃಂಗೇರಿ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ
– ಕಳಸದಲ್ಲಿ ವಿಶೇಷ ಪೂಜೆ : ಸಾಂಸ್ಕೃತಿಕ ಸಂಭ್ರಮ
– ಕೊಪ್ಪ, ಹೊರನಾಡು, ಎನ್.ಆರ್.ಪುರದಲ್ಲಿ ಕಾರ್ಯಕ್ರಮ: ಎಲ್ಲೆಡೆ ರಾಮನ ಜಪ
NAMMUR EXPRESS NEWS
ಶೃಂಗೇರಿ: ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶೃಂಗೇರಿಯ ಚಪ್ಪರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. 22.01.24ರ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಶ್ರೀ ರಾಮತಾರಕ ಹೋಮ ಆರಂಭವಾಗಲಿದ್ದು, ಬೆಳಗ್ಗೆ ಹನ್ನೊಂದು ಗಂಟೆಗೆ ರಾಮ ತಾರಕ ಜಪ, ಭಜನೆ, ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನಂತರ ಹನ್ನೆರಡು ಗಂಟೆಗೆ ಸರಿಯಾಗಿ ಕರಸೇವಕರಿಗೆ ಗೌರವ ಸಮರ್ಪಣೆ ನಡೆಯಲಿದೆ. ಬೆಳಗ್ಗೆ ಹನ್ನೊಂದು ಮೂವತ್ತರಿಂದ ಎಲ್ .ಇ .ಡಿ ಪರದೆಯಲ್ಲಿ ಪ್ರೊಜೆಕ್ಟರ್ ಮೂಲಕ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ನಂತರ ದೇವಸ್ಥಾನದಲ್ಲಿ ತೀರ್ಥ ಪ್ರಸಾದ ವಿತರಣೆ ಹಾಗೂ ಭೋಜನ ವ್ಯವಸ್ಥೆ ಮಾಡಲಾಗಿದ್ದು. ರಾತ್ರಿ 7.30 ಕ್ಕೆ ಶ್ರೀ ರಾಮ ಜ್ಯೋತಿ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ ಹಾಗೂ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ.
ಕಳಸದಲ್ಲಿ ವಿವಿಧ ಕಾರ್ಯಕ್ರಮ
ಕಳಸ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೆಳಭಾಗದಲ್ಲಿ ಶ್ರೀ ರಾಮ ಸೇವಾ ಯುವಕ ಸಂಘ (ರಿ.) ಕೆಳಭಾಗ ಮತ್ತು ಶ್ರೀರಾಮ ಭಕ್ತವೃಂದ ಇವರ ಸಹಯೋಗದಲ್ಲಿ, “ಶ್ರೀರಾಮ ಮಹಾಪ್ರಣೀಪತ್ಯೋತ್ಸವ” ಕಾರ್ಯಕ್ರಮವನ್ನು ಇದೇ ಸೋಮವಾರ 22.01.2024 ರಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥನೆ ಮತ್ತು ಶ್ರೀರಾಮನ ವಿಗ್ರಹದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲರ್ಸ್ ಕನ್ನಡ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮವನ್ನು ಆಯೋಜಿಸಲಾಗಿದೆ.
ಕಾಫಿನಾಡಿನ ಎಲ್ಲಾ ತಾಲೂಕಲ್ಲಿ ರಾಮನ ಜಪ!
ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಮೂಡಿಗೆರೆ, ತರೀಕೆರೆ, ಅಲ್ದುರ್, ಅಜ್ಜಂಪುರ, ಕಳಸ ತಾಲೂಕಿನ ಹಳ್ಳಿ ಹಳ್ಳಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ಎಲ್.ಇ.ಡಿ ಮೂಲಕ ರಾಮನ ಪ್ರತಿಷ್ಠಾಪನೆ ವಿಡಿಯೋ ನೇರ ಪ್ರಸಾರ ಮಾಡಲಾಗುತ್ತದೆ.