ಚಿಕ್ಕಮಗಳೂರು ಬಾಲಕಿ ರೇಪ್: 10 ಮಂದಿ ಅರೆಸ್ಟ್!
– ಶೃಂಗೇರಿ ಪ್ರಕರಣದ ರೀತಿಯಲ್ಲೇ ಮತ್ತೊಂದು ಪ್ರಕರಣ
-16 ವರ್ಷದ ಬಾಲಕಿಯ ಮೇಲೆ ಕಿರುಕುಳ
– ಪ್ರಿಯಕರ ಸೇರಿ 11 ಮಂದಿಗೆ ಜೈಲು..!
NAMMUR EXPRESS NEWS
ಚಿಕ್ಕಮಗಳೂರು: ಬಾಲಕಿಯರ ಬಾಲ ಮಂದಿರದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿ ಅತ್ಯಾಚಾರಕ್ಕೆ ಕಾರಣವಾಗಿದ್ದ ನಾಲ್ವರು ಸೇರಿ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣ ಇದೀಗ ಭಾರೀ ಸುದ್ದಿಗೆ ಕಾರಣವಾಗಿದೆ. ಏಕೆಂದರೆ ಶೃಂಗೇರಿಯಲ್ಲಿ ಹಲವು ವರ್ಷಗಳ ಹಿಂದೆ ಇಂತಹದ್ದೇ ಪ್ರಕರಣ ನಡೆದು ಹಲವು ಮಂದಿ ಜೈಲುಪಾಲಾಗಿದ್ದರು.
ಏನಿದು ಪ್ರಕರಣ?!:
ಶಿವಮೊಗ್ಗದಲ್ಲಿ ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಯುವಕನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. 16 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನ ವಿರುದ್ಧಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಬಾಲಕಿಯನ್ನು ಚಿಕ್ಕಮಗಳೂರಿನ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.
ಬಾಲ ಮಂದಿರದಿಂದ ಮತ್ತೊಬ್ಬ 14 ವರ್ಷದ ಬಾಲಕಿಯೊಂದಿಗೆ ಹೊರಹೋಗಿದ್ದ ಬಾಲಕಿ, ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ.
ಈ ಇಬ್ಬರು ಬಾಲಕಿಯರನ್ನು ಹಾಸನದ ಮತ್ತೊಬ್ಬ ಮಧ್ಯವರ್ತಿಯ ಬಳಿ ಚಿಕ್ಕಮಗಳೂರಿನ ಮಧ್ಯವರ್ತಿ ಕಳುಹಿಸಿದ್ದಾರೆ. ಅಲ್ಲಿ ಇಬ್ಬರು ಬಾಲಕಿಯರ ಮೇಲೆ ಹಲವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ಬಸ್ ಹತ್ತಿ ಬೆಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಬಾಲ ಮಂದಿರದ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಧರ್ಮಸ್ಥಳದಿಂದ ಬಾಲಕಿಯರನ್ನು ಕರೆ ತಂದು ವಿಚಾರಿಸಿದಾಗ ವೇಶ್ಯಾವಾಟಿಕೆಗೆ ತಳ್ಳಿದ್ದರಿಂದ ಹಾಸನದಲ್ಲಿ ಹಲವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಬಾಲಕಿಯರು ಪೊಲೀಸರ ಮುಂದೆ ತಿಳಿಸಿದ್ದಾರೆ. ಚಿಕ್ಕಮಗಳೂರಿನಿಂದ ಹಾಸನಕ್ಕೆ ಕಳುಹಿಸಿದ ಆರೋಪದಲ್ಲಿ ಮಧ್ಯವರ್ತಿ ದಂಪತಿ, ಹಾಸನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾದ ದಂಪತಿ, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರು ಮಂದಿ ಸೇರಿ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಲ ಮಂದಿರದಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಆಗಿರುವ ಪ್ರಮಾದಕ್ಕೆ ಕಾರಣ ಕೇಳಿ ಕಾವಲುಗಾರರಿಗೆ ಬಾಲ ಮಂದಿರದ ಮುಖ್ಯಸ್ಥರು ನೋಟಿಸ್ ನೀಡಿದ್ದಾರೆ. ಈ ಪ್ರಕರಣ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.