– ದತ್ತ ಪೀಠದಲ್ಲಿ ಮೂರು ದಿನಗಳ ಕಾಲ ಜಯಂತಿ ಆಚರಣೆ!
– ಪ್ರಮೋದ್ ಮುತಾಲಿಕ್ ಕಾಫಿ ನಾಡಿಗೆ ಬರದಂತೆ ಆದೇಶ!
– ಜಿಲ್ಲೆಯಲ್ಲಿ ಹೈ ಅಲರ್ಟ್! ಸಿ ಟಿ ರವಿ, ಶೋಭಾ ಕರಂದ್ಲಾಜೆ ಭಾಗಿ.
– ಮುಳ್ಳಯನ ಗಿರಿಯ ಸುತ್ತ ಮುತ್ತಲಿನ ಪ್ರಾಂತ್ಯಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಕ್ಲೋಸ್!
NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿನ್ನೆಯಿಂದ ದತ್ತಜಯಂತಿಯ ಅಂಗವಾಗಿ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ದತ್ತಾತ್ರೇಯರ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದ ನಂತರ, ಮಾಲಾಧಾರಿಗಳು, ಮಹಿಳೆಯರು, ಮಕ್ಕಳಿಂದ ಭಜನೆ, ವಾದ್ಯಗೋಷ್ಠಿ, ಮೆರವಣಿಗೆಗಳು ನಡೆದವು. ಕೈಯಲ್ಲಿ ಭಾಗವಧ್ವಜ ಹಿಡಿದು, ಕೇಸರಿ ಶಾಲಿನೊಂದಿಗೆ ದತ್ತಾತ್ರೇಯರ ಮೂರ್ತಿ ಮತ್ತು ಫೋಟೋಗಳನ್ನ ಹಿಡಿದು ನಾಮ ಸ್ಮರಣೆ ಮಾಡುತ್ತಾ, ಜೈಕಾರ ಹಾಕುತ್ತಾ ಸಾಗಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು. ಕಾರ್ಯಕ್ರಮದಲ್ಲಿ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಮಾಜಿ ಶಾಸಕ ಸಿ.ಟಿ ರವಿ ಮತ್ತು ಶೋಭಾ ಕರಂದ್ಲಾಜೆ ಅನೇಕರು ಉಪಸ್ಥಿತರಿದ್ದರು. ಆರ್ ಅಶೋಕ್ ಅವರು ಕೂಡ ದತ್ತ ಮಾಲೆ ಧರಿಸಿದ್ದು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.ಈ ಕಾರ್ಯಕ್ರಮವನ್ನು ಪ್ರತಿ ವರ್ಷವೂ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸುತ್ತಿದ್ದು ಈ ವರ್ಷವೂ ಹಾಗೆಯೇ ನಡೆಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯು ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ 4000 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಿದ್ದು, ಹೈ ಅಲರ್ಟ್ ಜಾರಿಯಲ್ಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಮತ್ತು ಗಂಗಾಧರ್ ಮಹಾದೇವ್ ರಾವ್ ಕುಲಕರ್ಣಿ ಅವರಿಗೆ 14 ದಿನಗಳ ಕಾಲ ಈ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಇವರು ದತ್ತ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಸಾಧ್ಯತೆ ಇದ್ದು ಈ ಮೂಲಕ ಏನಾದರು ಮತೀಯ ಗಲಭೆಗಳು ಸಂಭವಿಸುವ ಅವಕಾಶಗಳಿದ್ದು, ಡಿ.23 ರಿಂದ 5ರ ವರೆಗು ಪ್ರವೇಶ ನಿಶೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದಾರೆ. ಮುಳ್ಳಯನ ಗಿರಿ ಸುತ್ತಲಿನ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಇಂದು ನಾಳೆ ಮತ್ತು ಬುಧವಾರದವರೆಗೂ ಮುಚ್ಚಲಾಗಿದ್ದು ಮದ್ಯ ಮಾರಾಟ ನಿಷೇಧಿಸಲಾಗಿದೆ.