– ಇಡೀ ಜಿಲ್ಲೆಯಲ್ಲಿ ದತ್ತ ಜಯಂತಿ ಆಚರಣೆ
– ಪ್ರವಾಸಿಗರಿಗೆ ನಿರ್ಬಂಧ
– ದತ್ತ ಪೀಠಕ್ಕೆ ಜನವೋ ಜನ!
NAMMUR EXPRESS NEWS
ಚಿಕ್ಕಮಗಳೂರು: ಮಾರ್ಗಶಿರ ಮಾಸದ ಹುಣ್ಣಿಮೆಯ ರಾತ್ರಿಯಂದು ದತ್ತ ಜಯಂತಿಯನ್ನು ನಾಡಿನ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನ ದತ್ತಾತ್ರೇಯರು ಜನಿಸಿದ ದಿನವಾಗಿದ್ದು, ದತ್ತ ಜಯಂತಿಯ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹತ್ತು ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಡಿಸೆಂಬರ್ 26 ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಮತ್ತು ನಗರದಲ್ಲಿ ಪೋಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ಅಂಗವಾಗಿ ದತ್ತ ಭಕ್ತರು ಮಾಲೆ ಧರಿಸಿಕೊಂಡು ಬಂದಿದ್ದು, ಬುಧವಾರ ಸಂಜೆ ದತ್ತ ಭಕ್ತರು ಭವ್ಯ ಶೋಭಯಾತ್ರೆ ನಡೆಸಿದರು. ಮಾಲಾಧಾರಿಗಳು ದತ್ತಾತ್ರೇಯರ ಮೂರ್ತಿಯನ್ನು ಹೆಗಲಮೇಲೆ ಹೊತ್ತುಕೊಂಡು ಮಹಮ್ಮಾಯಿ ದೇವಸ್ಥಾನದಿಂದ ಸಂಜೆ ಮೆರವಣಿಗೆ ಹೊರಟಿದ್ದು, ಮರೆವಣಿಗೆಯುದ್ದಕ್ಕೂ ಮಕ್ಕಳ ವಾದ್ಯಗೋಷ್ಠಿ, ಭಜನೆ, ಕುಣಿತಗಳು ಮುದ ನೀಡಿತ್ತು. ಈ ಧಾರ್ಮಿಕ ಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಭಾಗವಹಿಸಿ ದತ್ತಾತ್ರೇಯ ನಾಮಸ್ಮರಣೆ ಮಾಡಿದ್ದು ಇನ್ನಷ್ಟು ಮೆರುಗು ನೀಡಿತ್ತು