ದತ್ತಜಯಂತಿ ಸಿದ್ಧತೆ ಶುರು!
– ದತ್ತಜಯಂತಿಯಲ್ಲಿ 20 ಸಾವಿರ ಭಕ್ತರು
– 3 ದಿನಗಳ ಅದ್ದೂರಿ ಉತ್ಸವಕ್ಕೆ ಸಿದ್ಧತೆ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲು ಮುಳ್ಳಯ್ಯನಗಿರಿ ತಪ್ಪಲಿನ ದತ್ತಪೀಠದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ದತ್ತ ಜಯಂತಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ದತ್ತ ಜಯಂತಿಯನ್ನು ನಾಡ ಉತ್ಸವನ್ನಾಗಿ ಆಚರಿಸಲಾಗುವುದು. ಡಿಸೆಂಬರ್ 17 ರಂದು ಸ್ಕಂದ ಪಂಚಮಿ ದಿನ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲಾ ಧಾರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾದ್ಯಂತ ಡಿ. 24 ರಿಂದ 26ರವರೆಗೆ ದತ್ತಜಯಂತಿ ಉತ್ಸವ ನಡೆಯಲಿದ್ದು, ಈ ವರ್ಷ ದತ್ತಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ತೀರ್ಮಾನಿಸಿದೆ. ದತ್ತಜಯಂತಿ ಉತ್ಸವ ಪ್ರಯುಕ್ತ 8.24 ರಂದು ದತ್ತಪೀಠದಲ್ಲಿ ಅನಸೂಯ ಜಯಂತಿ ನಡೆಯಲಿದೆ. ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ಸಾವಿರಾರು ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಿದ್ದಾರೆ. ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಪಾಲಿಟೆಕ್ನಿಕ್ ವೃತ್ತದಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ ಎಂದು ಹೇಳಿದರು.
ಮರುದಿನ ಡಿಸೆಂಬರ್ 25ರ ಬೆಳಗ್ಗೆ ದತ್ತಪೀಠದಲ್ಲಿ ದತ್ತ ಹೋಮ, ರುದ್ರ ಹೋಮ ನಡೆಯಲಿದೆ. ಇದೇ ದಿನ ಮಧ್ಯಾಹ್ನ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯುವುದು. ನಗರದ ಕಾಮಧೇನು ಗಣಪತಿ ದೇವಾಲಯ ಆವರಣದಿಂದ ಆರಂಭವಾಗುವ ಯಾತ್ರೆ ಮುಖ್ಯರಸ್ತೆಯಲ್ಲಿ ಸಾಗಿ, ಸಂಜೆ ಆಜಾದ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದರು.
ದತ್ತಪೀಠದಲ್ಲಿ ಡಿ.26 ರಂದು ದತ್ತಜಯಂತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 20 ಸಾವಿರ ಭಕ್ತರು ಆಗಮಿಸಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ ಎಂದು ರಂಗನಾಥ ವಿವರಿಸಿದರು