ಕಾಫಿ ನಾಡಲ್ಲಿ ವೈಭವದ ನವರಾತ್ರಿ ಉತ್ಸವ!
– ಶೃಂಗೇರಿಯಲ್ಲಿ ಶರನ್ನವರಾತ್ರಿ ಮಹೋತ್ಸವ
– ಹಂಸವಾಹನಾರೂಢಳಾಗಿ ಶಾರದೆ ದರ್ಶನ
– ಹೊರನಾಡು, ಶೃಂಗೇರಿಗೆ ಭಕ್ತ ಸಾಗರ
NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿನಲ್ಲಿ ಶರನ್ನವರಾತ್ರಿಯ ಅದ್ದೂರಿ ಆಚರಣೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಶೃಂಗೇರಿಯ ಶಾರದಾ ಪೀಠದಲ್ಲಿ ಶಾರದಾದೇವಿ ಹಂಸವಾಹನಾರೂಢಳಾಗಿ ಭಕ್ತರಿಗೆ ದರ್ಶನ ನೀಡಿದ್ರೆ ಹೊರನಾಡಿನಲ್ಲಿ ಅನ್ನಪೂಣೇಶ್ವರಿ ಹಂಸರೂಢ ಸರಸ್ವತಿ ರೂಪದಲ್ಲಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಾಳೆ. ಹಂಸವಾಹನಾರೂಢಳಾಗಿ ಶಾರದೆ ದರ್ಶನ: ನವರಾತ್ರಿ ಸಮಯದಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳಿಗೆ ಸಾಕ್ಷಿ ಆಗಲಿದೆ. ನವರಾತ್ರಿ ಹಿನ್ನೆಲೆಯಲ್ಲಿ ಇಂದು ಶೃಂಗೇರಿಯ ಶಾರದಾ ಪೀಠದ ಮಾತೆ ಶಾರದೆ ಕೈಯಲ್ಲಿ ಕಮಂಡಲು,ಅಕ್ಷಮಾಲೆ,ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸವಾಹನಾರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾದಿಗಳು ಭಾಗವಹಿಸಿದರು.
ಶ್ರೀಮಠದಲ್ಲಿ ರಾತ್ರಿ ನಡೆದ ದರ್ಬಾರನಲ್ಲಿ ಕಿರಿಯಶ್ರೀ ಗಳು ಭಾಗಿಯಾದರು ನವರಾತ್ರಿಯ ಸಂದರ್ಭದಲ್ಲಿ ಶ್ರೀಮಠದಲ್ಲಿ ಪಾರಾಯಣಗಳು, ಸೂರ್ಯನಮಸ್ಕಾರ. ಶ್ರೀಸೂಕ್ತ ಜಪ, ಭುವನೇಶ್ವರಿ -ಜಪ, ದುರ್ಗಾಜಪ, ಮೊದಲಾದ, ಜಪಗಳು ನಡೆದ್ರೆ,ಶ್ರೀಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನಾತೆಯ ಆವಾಸಸ್ಥಾನವಾದ ಶ್ರೀಚಕ್ರಕ್ಕೆ ನವಾವರಣ ಪೂಜೆ ನಡೆಯಿತು. ನವರಾತ್ರಿ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸುವಾಸಿನಿ ಪೂಜೆ, ಕುಮಾರೀ ಪೂಜೆ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಇತ್ಯಾದಿಗಳು ನಡೆಯುತ್ತವೆ. ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ರಥೋತ್ಸವ ನಡೆಯುಲಿದೆ.
ಹೊರನಾಡಿಗೂ ಭಕ್ತರ ಆಗಮನ
ಶನಿವಾರ, ಭಾನುವಾರ, ಸೋಮವಾರ ಹೊರನಾಡಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಭಕ್ತರು ಹೆಚ್ಚಾಗಿದ್ದರು.