ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನಕ್ಕೆ ಸಿದ್ಧತೆ
– ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಿ ಅಲಂಕಾರ: ಡಿ.14 ರಂದು ದತ್ತ ಪಾದುಕೆ ದರ್ಶನ
– ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಭಜರಂಗದಳ ಮತ್ತು ವಿಹೆಚ್ಪಿ ನೇತೃತ್ವದಲ್ಲಿ 25ನೇ ವರ್ಷದ ದತ್ತಜಯಂತಿ ಆಚರಣೆಗೆ ಚಾಲನೆ ದೊರೆತಿದೆ. ಚಿಕ್ಕಮಗಳೂರು ನಗರ, ಪಟ್ಟಣಗಳಲ್ಲಿ ಕೇಸರಿ ಭಾವುಟ ಮತ್ತು ಬಂಟಿಂಗ್ಸ್ ಕಟ್ಟಿ ಅಲಂಕಾರ ಮಾಡಲಾಗುತ್ತದೆ. ಭಜರಂಗದಳ, ವಿಹೆಚ್ಪಿ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಡಿಸೆಂಬರ್ 6 ರಂದು ರಾಜ್ಯದಾದ್ಯಂತ ದತ್ತಮಾಲೆ ಧಾರಣೆ ಮಾಡುತ್ತಾರೆ. ಡಿಸೆಂಬರ್ 12 ರಂದು ಅನಸೂಯಾ ಜಯಂತಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿಸೆಂಬರ್ 13 ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನೆರವೇರುತ್ತದೆ. ನಂತರ ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳು ಗುಹೆಯಲ್ಲಿನ ದತ್ತ ಪಾದುಕೆ ದರ್ಶನ ಪಡೆಯುತ್ತಾರೆ. ಈ ದಿನ ರಾಜ್ಯದ ಮೂಲೆಗಳಿಂದ ಸಾವಿರಾರು ದತ್ತಮಾಲಾಧಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಗೋರಿಗಳಿಲ್ಲ ಇದು ಹಿಂದೂಗಳ ಪವಿತ್ರ ದತ್ತಪೀಠ ಅನ್ನುತ್ತಿದ್ದರೇ, ಮುಸ್ಲೀಮರು ಬಾಬಾ ಬುಡನ್ ಜೊತೆ ದಾದಾಹಯಾತ್ ಖಲಂದರ್ ಸೇರಿದಂತೆ ಅವರ ಶಿಷ್ಯರ ಗೋರಿಗಳಿರುವ ಪವಿತ್ರ ಸ್ಥಳ ಎನ್ನುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವಿನ ದೇವರ ಹೆಸರಿನ ಭೂ ವಿವಾದ 25 ವರ್ಷಗಳಿಂದ ಜೀವಂತವಾಗಿದೆ.