ಪಶ್ಚಿಮ ಘಟ್ಟದೊಳಗೆ ರಿಯಲ್ ಎಸ್ಟೇಟ್ ದಂಧೆ!
– ದಟ್ಟ ಕಾಡಿನ ಮಧ್ಯ ಸೈಟ್ಗಳ ನಿರ್ಮಾಣ!
– ನೂರಾರು ಎಕರೆ ಸ್ವಾಹಾ!
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನ ಪಶ್ಚಿಮಘಟ್ಟದ ದಟ್ಟ ಕಾಡಿನ ನಡುವೆ ರಹಸ್ಯವಾಗಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವುದು ಬಯಲಾಗಿದೆ. ದೊಡ್ಡ ಕಂಪನಿಯೊಂದು ದಟ್ಟ ಕಾಡಿನ ನಡುವೆ ಸೈಟ್ಗಳನ್ನು ನಿರ್ಮಿಸಿ ಮಾರಲು ಸ್ಕೆಚ್ ಹಾಕಿದೆ. ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯಲ್ಲಿ ಈ ರಿಯಲ್ ಎಸ್ಟೇಟ್ ದಂಧೆ ಕಂಡುಬಂದಿದೆ. ಇಲ್ಲಿನ ಗ್ರಾಮಗಳಲ್ಲಿ 242 ಎಕರೆ ಭೂಮಿಯನ್ನು ಖಾಸಗಿ ಕಂಪನಿಗಳು ಭೂ ಪರಿವರ್ತನೆ ಮಾಡಿಸಿಕೊಂಡಿವೆ. ಲೇಔಟ್ ನಿರ್ಮಿಸುವ ಯೋಜನೆ ರೂಪಿಸಿದ್ದು, ನಗರದ ಶ್ರೀಮಂತರಿಗೆ ಹಾಗೂ ಹೊರರಾಜ್ಯದವರಿಗೂ ಮಾರಾಟ ಮಾಡಲು ಪ್ಲಾನ್ ಹಾಕಿಕೊಂಡಿವೆ. ಕಾಫಿ ಪ್ಲಾಂಟೇಶನ್ ಹೆಸರಲ್ಲಿ ಕದ್ದು ಮುಚ್ಚಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಕಳ್ಳಾಟ ಇದಾಗಿದೆ.
ಭದ್ರಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಲೇಔಟ್ ಯೋಜನೆ ಮಾಡಲಾಗುತ್ತಿದೆ. ಆನೆ, ಹುಲಿ ಮುಂತಾದ ದೊಡ್ಡ ಜೀವಿಗಳು ಸೇರಿದಂತೆ ನೂರಾರು ಬಗೆಯ ಜೀವವೈವಿಧ್ಯ ಹಾಗೂ ಸಸ್ಯವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ ಇದಾಗಿದೆ. ಇದು ಪರಿಸರ ಸೂಕ್ಷ್ಮ ವಲಯ ಪ್ರದೇಶವಾಗಿದ್ದು, ಇಂಥಲ್ಲಿ ಲೇಔಟ್ ನಿರ್ಮಿಸಲು, ದೊಡ್ಡ ಉದ್ಯಮಗಳಿಗೆ ಅವಕಾಶವಿಲ್ಲ. ಇಲ್ಲಿ ರಾಜ್ಯದ ಬೃಹತ್ ಕಂಪನಿಗಳು ರಿಯಲ್ ಎಸ್ಟೇಟ್ ದಂಧೆ ನಡೆಸುವುದರಿಂದ ವನ್ಯಜೀವಿ ತಾಣಕ್ಕೆ ಕಂಟಕವಾಗಲಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ವನ್ಯಜೀವಿ ಕಾಯಿದೆಯ ಅಂಶಗಳನ್ನು ಗಾಳಿಗೆ ತೂರಿ ಸೀಕ್ರೆಟ್ ಆಗಿ ಈ ರಿಯಲ್ ಎಸ್ಟೇಟ್ ದಂಧೆಗೆ ತೊಡಗಿಕೊಂಡಿವೆ. ಇಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.