ಸುಧೀರ್ ಕುಮಾರ್ ಮುರೊಳ್ಳಿ ರಾಜಕೀಯ ಹೆಜ್ಜೆ!
– ಪಕ್ಷದ ಇತರೆ ನಾಯಕರಿಗೆ ಅವಕಾಶ ಮಾಡಿಕೊಡಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ
– ಲೋಕ ಸಭಾ ಅಭ್ಯರ್ಥಿ ಆಗುವ ಸುಳಿವು ನೀಡಿದ್ರಾ ಮುರೊಳ್ಳಿ?!
NAMMUR EXPRESS NEWS
ಚಿಕ್ಕಮಗಳೂರು: ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಂಕಲ್ಪ ಸಮಾರಂಭದಲ್ಲಿ ಕಾಂಗ್ರೆಸ್ ವಕ್ತಾರ, ಖ್ಯಾತ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ ಕೊಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಈ ಮುಂಚೆಯೇ ಗುಸು ಗುಸು ಕೇಳಿಬರುತ್ತಿದ್ದು ಇದೀಗ ಸ್ವತಃ ಮುರೊಳ್ಳಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಹಾಗೂ ಪಕ್ಷ ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ತಂದರೂ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ರಾಜಕೀಯವಾಗಿ ಎಲ್ಲರಿಗೂ ಅವಕಾಶ ಕೊಡುವ ಕಾರಣ ಇನ್ನಷ್ಟು ನಾಯಕರಿಗೆ ಅವಕಾಶ ಮಾಡಿಕೊಡಲು ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಜತೆಗೆ ಚಿಕ್ಕಮಗಳೂರು ಉಡುಪಿ ಲೋಕ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮುರೊಳ್ಳಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ ಎಂಬ ಚರ್ಚೆ ಶುರುವಾಗಿದೆ. ಮೂಲತಃ ಶೃಂಗೇರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಿಡಿತ ಸಾಧಿಸಿಕೊಂಡು ಬಂದ ಕ್ಷೇತ್ರ. ಅದಾಗ್ಯೂ ಮುರೊಳ್ಳಿಯವರ ಕಠಿಣ ಪರಿಶ್ರಮದಿಂದಾಗಿ ಕಾಂಗ್ರೆಸ್ ಸದೃಢವಾಗಿ ನಿಂತಿದೆ. ಕಳೆದ ಬಾರಿ ಚುನಾವಣೆಯಲ್ಲಿ 6ಕ್ಕೆ 6 ಸ್ಥಾನ ಕಾಂಗ್ರೆಸ್ ಗೆದ್ದಿದೆ.
ಸಾಮಾಜಿಕ ಹೋರಾಟದಲ್ಲಿ ಸಕ್ರಿಯ
ವೃತ್ತಿಯಲ್ಲಿ ವಕೀಲರಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಸಾಮಾಜಿಕ ಚಿಂತಕರಾಗಿ, ಜನಪರ ಕಾಳಜಿಯ ಹೋರಾಟದಿಂದ ರಾಜ್ಯದಲ್ಲಿ ಚಿರಪರಿಚಿತರು. ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ, ಪಕ್ಷದ ಪರ ಹಗಳಿರುಳು ದುಡಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವ ಹಿಂದೆ, ಮಲೆನಾಡು, ಕರಾವಳಿ ಹಾಗೂ ರಾಜ್ಯದ ಹಲವು ಭಾಗದಲ್ಲಿ ಸುಧೀರ್ ಕುಮಾರ್ ಮುರೊಳ್ಳಿಯವರ ಪಾಲ್ಗೊಳ್ಳುವಿಕೆ ಮಹತ್ತರವಾದುದು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಜನರ ಹೃದಯ ಗೆದ್ದ ಮಲೆನಾಡು ಹುಡುಗ.
ಮಲೆನಾಡು- ಕರಾವಳಿ ಒಕ್ಕೂಟ ಸ್ಥಾಪಿಸಿ, ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಬದುಕು, ಭಾವನೆ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಯುವ ನಾಯಕ. ಇನ್ನು ಎಲ್ಲಾ ವಯೋಮಾನದವರ ಪ್ರೀತಿ ಪಡೆದ ನಾಯಕ. ಸಾಮಾಜಿಕ ಅಸಮತೋಲನ, ಸರಿ ಸಮಾಜದ ಪರಿಕಲ್ಪನೆಯ ಮನಸ್ಥಿತಿ ಹೊಂದಿರುವುದರಿಂದ ಬಿಜೆಪಿ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತರಲ್ಲೂ ಕೂಡ ಸುಧೀರ್ ಕುಮಾರ್ ಮುರೊಳ್ಳಿಯವರನ್ನು ವಿರೋಧಿಸುವವರು ತೀರ ಕಡಿಮೆ. ಇವರ ರಾಜಿನಾಮೆಯ ಬೆನ್ನಲ್ಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಗಳ ದಂಡೇ ಇದೆ ಎನ್ನುವುದು ಕೂಡ ಸತ್ಯ. ಮುಂದೆ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.