ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
-ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ವ್ಯಕ್ತಿ
– ಆಲ್ದೂರು : ಹೆದ್ದಾರಿಯಲ್ಲೂ ಹೊಂಡ, ಸವಾರರ ಪರದಾಟ
NAMMUR EXPRESS NEWS
ಜಯಪುರ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿ ಜಯಪುರ ಗ್ರಾಮ ವ್ಯಾಪ್ತಿಯ ಮಳಿಗೆ ಸಮೀಪ ಗುರುವಾರ ಜಯಪುರ- ಕೊಪ್ಪ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಸಿ.ಇ.ಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಸೀರ್, ಸೈಯದ್ ವಸೀಂ ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳಿಂದ 02 ಕೆ.ಜಿ 150 ಗ್ರಾಂ ಗಾಂಜಾ, 3 ಮೊಬೈಲ್ ಫೋನ್ ಮತ್ತು ಬೋಲೇರೋ ವಾಹನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಉಳಿದ ಮೂವರು ಆರೋಪಿಗಳಾದ ವಿಜಯ್, ನಿಜಾಮ್, ಮಂಜ ತಲೆ ಮರೆಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಇಎನ್ ಠಾಣೆ ಪಿಎಸ್ ಐ ವಿಶ್ವನಾಥ್, ಸಿಬ್ಬಂದಿ ಇಮ್ರಾನ್ ಖಾನ್, ರಾಜು, ಹರೀಶ್, ರಮೇಶ್, ಹರಿಪ್ರಸಾದ್, ಮಹೇಂದ್ರ ಇದ್ದರು.
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ವ್ಯಕ್ತಿ
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ವ್ಯಕ್ತಿಯೋರ್ವ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ನಡೆದಿದೆ. ರಸ್ತೆಯಲ್ಲಿ ವ್ಯಕ್ತಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದು, ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಮೇಲಕ್ಕೆ ಏಳದ ಭೂಪ, ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ವಾಹನದ ಹಾರ್ನ್ ಗೆ ಕೊನೆಗೂ ಎದ್ದ ವ್ಯಕ್ತಿ, ವಾಹನ ಹೋದ ನಂತರ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆದ್ದಾರಿಯಲ್ಲೂ ಹೊಂಡ, ಸವಾರರ ಪರದಾಟ
ಆಲ್ಲೂರು: ಸಮೀಪದ ಆಲದಗುಡ್ಡೆ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ದಂಬದಹಳ್ಳಿವರೆಗೂ 2 ಕಿ.ಮೀ. ದೂರದವರೆಗೆ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ರಸ್ತೆಯು ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಉಡುಪಿ ಜಿಲ್ಲೆಯ ಬೈಂದೂರಿನವರೆಗೆ ಸಂಪರ್ಕ ಕಲ್ಪಿಸುತ್ತದೆ. ಹೆದ್ದಾರಿಯು ವಸ್ತಾರೆ ಗ್ರಾಮದ ಬಳಿ ಕವಲೊಡೆದು ಆಲ್ಲೂರು ಮಾರ್ಗವಾಗಿ ಶೃಂಗೇರಿ, ಹರಿಹರಪುರ ಹೊರನಾಡು ಸಂಪರ್ಕಿಸುತ್ತದೆ. ಮೂಡಿಗೆರೆ, ಚಾರ್ಮಾಡಿ ಘಾಟ್ ಮೂಲಕ ಧರ್ಮಸ್ಥಳ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಬರುವ ಭಕ್ತರು ಮತ್ತು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಇದೇ ರಸ್ತೆ ಮೂಲಕ ಬರಬೇಕಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಅವರ ಪಾಡು ಹೇಳತೀರದಾಗಿದೆ.
ರಾತ್ರಿ ಸಮಯದಲ್ಲಿ ಚಾಲಕರು ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಕೆಲವೆಡೆ ಗ್ರಾಮಸ್ಥರು ಗುಂಡಿಗಳಲ್ಲಿ ಮಣ್ಣನ್ನು ತುಂಬಿದ್ದು, ಲಾರಿ, ಟಿಪ್ಪರ್ ಅದರ ಮೇಲೆ ಸಂಚರಿಸುವಾಗ ಇಡೀ ರಸ್ತೆಯ ತುಂಬ ಧೂಳು ಏಳುತ್ತದೆ. ಆಲದಗುಡ್ಡೆಯಿಂದ ದಂಬದಹಳ್ಳಿವರಗೆ ಗುಂಡಿಗಳನ್ನು ಇನ್ನೂ ಮುಚ್ಚಿಲ್ಲ. ಹೊಸ ರಸ್ತೆ ಕಾಮಗಾರಿ ಆರಂಭ ಆಗುವವರೆಗಾದರೂ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡಬೇಕು’ ಎಂದು ದ್ವಿಚಕ್ರ ವಾಹನ ಸವಾರ ಆಗ್ರಹಿಸಿದರು. ಪ್ರತಿ ಬಾರಿ ಚಿಕ್ಕಮಗಳೂರಿನಿಂದ ಆಲ್ಲೂರಿಗೆ ಸರಕು ಸಾಗಿಸುವಾಗ, ವಾಹವನ್ನು ಗುಂಡಿಗಳಿಗೆ ಇಳಿಸಿ ರಿಪೇರಿಗೆ ಬಂದು, ಈಗ ಸಾಲ ಮಾಡಿ ಹೊಸ ವಾಹನ ಖರೀದಿ ಮಾಡಿದ್ದೇನೆ. ವಾಹನವನ್ನು ದುರಸ್ತಿ ಮಾಡಬಹುದು, ಆದರೆ, ಸವಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಗಳಿಗೆ ಆಧಾರ ಏನು’ ಎಂದು ಬೇಸರ ವ್ಯಕ್ತಪಡಿಸಿದರು. ಸಂಬಂಧಿಸಿದ ಇಲಾಖೆ ರಸ್ತೆ ದುರಸ್ತಿಗೆ ತಕ್ಷಣ ಮುಂದಾಗಬೇಕು ಎಂದು ಸ್ಥಳೀಯರಾದ ಮೂರ್ತಿ ಕೆ., ನೀಲೇಶ್ ಪಟೇಲ್, ಮಹೇಶ್ ಒತ್ತಾಯಿಸಿದರು.