ಆಕಸ್ಮಿಕ ಬೆಂಕಿಗೆ ಟಿಟಿ ವಾಹನ ಸಂಪೂರ್ಣ ಭಸ್ಮ!
– ಕಾಫಿ ನಾಡಿನ ಕುದುರೆಮುಖ ವ್ಯಾಪ್ತಿಯಲ್ಲಿ ಘಟನೆ
– ಸುಟ್ಟು ಕರಕಲಾದ ಟಿಟಿ,ಯಾವುದೇ ಪ್ರಾಣಾಪಾಯವಿಲ್ಲ
NAMMUR EXPRESS NEWS
ಕುದುರೆಮುಖ: ಟೂರಿಸ್ಟ್ ವಾಹನವೊಂದು (ಟಿಟಿ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಕುದುರೆಮುಖದಲ್ಲಿ ಸಂಭವಿಸಿದೆ. ಉಡುಪಿಯ ಟೂರಿಸ್ಟ್ ವಾಹನದಲ್ಲಿ ಕಾರ್ಕಳ ಮಾಳ ಮಾರ್ಗವಾಗಿ ಕುದುರೆಮುಖದ ಮೂಲಕ ಕಳಸದ ಕಡೆಗೆ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಕುದುರೆಮುಖ ಸಮೀಪಿಸುತ್ತಿದ್ದಂತೆ ಟೂರಿಸ್ಟ್ ವಾಹನದಲ್ಲಿ ಏಕಾಏಕಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನ ತುಂಬಾ ವ್ಯಾಪಿಸಿದೆ. ಅದೃಷ್ಟವಶಾತ್ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದ ಪರಿಣಾಮ ಸಂಪೂರ್ಣ ವಾಹನ ಸುಟ್ಟುಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು.