ನಾಯಿ ವಿಷ್ಯದಲ್ಲಿ ಗಲಾಟೆ: ಆಸಿಡ್ ದಾಳಿ..!
– ನರಸಿಂಹರಾಜಪುರದಲ್ಲಿ ನಡೆದ ಘಟನೆ
– ಡಿ. 24 ರಿಂದ 26ರವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ
– ದತ್ತಜಯಂತಿ ಕಾರ್ಯಕ್ರಮ ಆಚರಣೆ ಹಿನ್ನೆಲೆ ಆದೇಶ
NAMMUR EXPRESS NEWS
ಎನ್.ಆರ್ ಪುರ: ಪಕ್ಕದ ಮನೆಯವರೊಂದಿಗೆ ನಾಯಿ ಬೊಗಳುವ ವಿಷಯಕ್ಕೆ ಆರಂಭವಾದ ಜಗಳವು ಆಸಿಡ್ ಎರಚುವ ಮಟ್ಟಕ್ಕೆ ತಿರುಗಿದ ಘಟನೆ ಎನ್.ಆರ್. ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಸುಂದರ್ ರಾಜ್ ಆಸಿಡ್ ದಾಳಿಗೆ ಒಳಗಾಗಿದ್ದು, ಆಸಿಡ್ ಎರಚಿದ ಜೇಮ್ಸ್ ಹಾಗೂ ಮರಿಯಮ್ಮ ನಾಪತ್ತೆಯಾಗಿದ್ದಾರೆ. ಸುಂದರ್ ರಾಜ್ ನಾಯಿಯೊಂದನ್ನು ಸಾಕಿದ್ದು, ಅದು ಬೊಗಳುವ ವಿಷಯಕ್ಕೆ ಸದಾ ಗಲಾಟೆ ನಡೆಯುತ್ತಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಸುಂದರ್ ರಾಜ್, ಜೇಮ್ಸ್ ಹಾಗೂ ಮರಿಯಮ್ಮಗೆ ನಾಯಿಯ ಹೆಸರಿನಲ್ಲಿ ಬೈಯುತ್ತಿದ್ದರು.
ಇದರಿಂದ ಸಿಟ್ಟಿಗೆದ್ದು ಆಸಿಡ್ ಎರಚಿದ್ದಾರೆ ಎನ್ನಲಾಗಿದೆ. ಆಸಿಡ್ ದಾಳಿಯಿಂದ ಗಂಭೀರ ಗಾಯಗೊಂಡ ಸುಂದರ್ ರಾಜ್ ರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎನ್. ಆರ್.ಪುರ. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮ ಆಚರಣೆ ಹಿನ್ನೆಲೆ ಇದೇ 24 ರಿಂದ 26 ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಡಿ. 24 ರ ಬೆಳಿಗ್ಗೆ 6 ಗಂಟೆ ಯಿಂದ 26ರ ಮಧ್ಯ ರಾತ್ರಿ 12 ರವರೆಗೆ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ ಅಧಿನಿಯಮ 1965 ವಿಧಿ 21ರಂತೆ ಎಲ್ಲ ನಮೂನೆ ಮದ್ಯದ ಅಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.