ಚಂದ್ರಯಾನ-3 ತಂಡದಲ್ಲಿ ಬಾಳೆಹೊನ್ನೂರಿನ ಯುವತಿ!
– ಡಾ. ನಂದಿನಿ ಚಂದ್ರಯಾನ 2ರಲ್ಲೂ ಕೆಲಸ ಮಾಡಿದ್ದರು
– ಭಾರತದ ಹೆಮ್ಮೆಯ ಸಾಧನೆಗೆ ಮಲೆನಾಡ ವಿಜ್ಞಾನಿ ಕೊಡುಗೆ
NAMMUR EXPRESS NEWS
ಬಾಳೆಹೊನ್ನೂರು: ಭಾರತಕ್ಕೆ ಚಂದ್ರನ ಅಂಗಳದಲ್ಲಿ ದೊಡ್ಡ ಜಯ ಸಿಕ್ಕಿದೆ. ಭೂಮಿಯಿಂದ ಹೊರಟ ಚಂದ್ರಯಾನ ನೌಕೆ 42 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಗೋಧೂಳಿ ಮುಹೂರ್ತದಲ್ಲಿ ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಿದ್ದು ವಿಶ್ವದಲ್ಲಿ ಭಾರತ ಹೊಸ ಮೈಲುಗಲ್ಲು ನೆಟ್ಟಿದೆ. ಈ ನಡುವೆ ಮಲೆನಾಡ ಯುವತಿ ಚಂದ್ರಯಾನ-3 ತಂಡದಲ್ಲಿ ಕೆಲಸ ಮಾಡಿದ್ದು, ಇದೀಗ ಆಕೆಯ ಸಾಧನೆಗೆ ಶುಭಾಶಯ ಮಹಾಪುರ ಹರಿದು ಬರುತ್ತಿದೆ. ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಯುವತಿ ಡಾ ಕೆ ನಂದಿನಿ: ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಶುಕ್ರವಾರ ಉಡಾವಣೆ ಮಾಡಿದ ಚಂದ್ರಯಾನ 3ರ ತಂಡದಲ್ಲಿ ಕೆಲಸ ಮಾಡಿದ್ದಾರೆ.
ಬಾಳೆಹೊನ್ನೂರು ಸಮೀಪದ ತುತ್ತೂರು ಗ್ರಾಮದ ಯುವತಿ ಬಾಳೆಹೊನ್ನೂರು ಪಟ್ಟಣದಲ್ಲಿ ಕಾಫಿ ಉದ್ಯಮ, ವ್ಯವಹಾರ ನಡೆಸುತ್ತಿರುವ ಕೇಶವಮೂರ್ತಿ, ಮಂಗಳ ದಂಪತಿ ಪುತ್ರಿ. ಡಾ. ಕೆ.ನಂದಿನಿ ಚಂದ್ರಯಾನ 3 ತಂಡದಲ್ಲಿ ಇದ್ದು ಶುಕ್ರವಾರ ನಡೆದ ಯಶಸ್ವಿ ಉಡಾವಣೆಯಲ್ಲಿ ಈಕೆಯೂ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಹರ್ಷ ಮೂಡಿದೆ.
ಮಲೆನಾಡ ಹೆಮ್ಮೆ ಡಾ. ನಂದಿನಿ
ಡಾ.ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019ರ ಚಂದ್ರಯಾನ 2ರ ತಂಡದಲ್ಲೂ ಭಾಗವಹಿಸಿದ್ದು, ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ.