
ಮನೆಯಲ್ಲಿಯೇ ಮದ್ದು: ಮತ್ತೇಕೆ ತಡ ಅಲ್ಲವೇ..?
ಹೆಲ್ತ್ ಟಿಪ್ಸ್, ನಮ್ಮೂರ್ ಎಕ್ಸ್ಪ್ರೆಸ್: ಹಲ್ಲು ಪಳಪಳನೆ ಹೊಳೆಯುತ್ತಿದ್ದರೆ ಎಷ್ಟು ಚೆಂದಾ..?. ಆದರೆ ಹಲ್ಲಿನ ಕರೆ, ಹಲ್ಲಿನ ಕೊಳೆ ಎಷ್ಟೋ ಜನರಿಗೆ ಕಿರಿಕಿರಿ. ಒಂದು ಕಡೆ ಅಂದ ಕಡಿಮೆ, ಮತ್ತೊಂದೆಡೆ ದುರ್ವಾಸನೆ. ಈ ಸಮಸ್ಯೆ ಯಾರದ್ದೂ ತಪ್ಪಲ್ಲ. ಆದರೆ ಮನೆಯಲ್ಲಿಯೇ ಇದಕ್ಕೆ ಮಾರ್ಗವೂ ಇದೆ.
ಹೆಚ್ಚಿನ ಜನರಿಗೆ ಅಡುಗೆ ಸೋಡಾ ಹಲ್ಲುಪುಡಿಯಂತೆ ಬಳಸಬಹುದು ಎಂದು ಗೊತ್ತೇ ಇಲ್ಲ. ಇದರ ಆಮ್ಲೀಯತೆಪರಿಣಾಮದಿಂದ ಹಲ್ಲುಗಳ ಕೊಳೆಯನ್ನು ಸುಲಭವಾಗಿ ನಿವಾರಿಸಬಹುದು. ಇದಕ್ಕಾಗಿ, ನೀವು ಅಡುಗೆ ಸೋಡಾವನ್ನು ಒಳಗೊಂಡಿರುವ ಟೂಥ್ ಪೇಸ್ಟ್ ಅನ್ನೂ ಬಳಸಬಹುದು. ಇದರಿಂದ ನಿಮ್ಮ ಹಲ್ಲು ಕಾಲಕ್ರಮೇಣ ಬೆಳ್ಳಗಾಗುತ್ತದೆ. ಜತೆಗೆ ಬಾಯಿಯ ದುರ್ವಾಸನೆಯೂ ಕಡಿಮೆ ಆಗುತ್ತದೆ.
2 ಬಾರಿ ಹಲ್ಲು ಉಜ್ಜಿ!: ಬ್ಯಾಕ್ಟೀರಿಯಾದಿಂದ ರಕ್ಷಿಸಲು ನೀವು ಬಯಸಿದರೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಅವಶ್ಯಕ. ಇದಲ್ಲದೆ, ನೀವು ಪ್ರತಿ ಬಾರಿ ಊಟ ಮಾಡಿದ ಬಳಿಕ ಅಥವಾ ಲಘು ಆಹಾರ ಸೇವಿಸಿದ ನಂತರವೂ ಹಲ್ಲುಗಳನ್ನು ಬ್ರಶ್ ಬಳಸಿ ಸ್ವಚ್ಛಗೊಳಿಸಲು ಪ್ರಯತ್ನಿಸಬೇಕು. ಇದರಿಂದ ಹಲ್ಲುಗಳನ್ನು ತಕ್ಷಣವೇ ಸ್ವಚ್ಛಗೊಳಿಸುವ ಮೂಲಕ ಬ್ಯಾಕ್ಟೀರಿಯಾಗಳಿಗೆ ಆಹಾರ ಒದಗಿಸದೇ ಇರದಂತೆ ನೋಡಿಕೊಳ್ಳಬಹುದು. ಬ್ಯಾಕ್ಟೀರಿಯಾಗಳು ತಮ್ಮ ಬಿಡಾರವನ್ನು ನಿರ್ಮಿಸುವುದನ್ನು ತಡೆಯಲು ಸಹಾಯ ಮಾಡುವ ಮೌತ್ವಾಶ್ ಅನ್ನೂ ನೀವು ಬಳಸಬಹುದು. ಆದರೆ ನೆನಪಿರಲಿ, ಮೌತ್ ವಾಶ್ ಬಾಯಿಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನೂ ಕೊಂದು ಬಿಡುತ್ತದೆ. ಆದ್ದರಿಂದ ಅತಿ ಮಿತ ಪ್ರಮಾಣದಲ್ಲಿ ಮಾತ್ರವೇ ಹಾಗೂ ಅಗತ್ಯವಿದ್ದರೆ ಮಾತ್ರವೇ ಬಳಸಿ. ಬಾಯಿಯ ಆರೋಗ್ಯ ಚೆನ್ನಾಗಿದ್ದರೆ ಮೌತ್ ವಾಶ್ ಬಳಕೆ ಬೇಡ.
ಅನೇಕ ಜನರು ಕೇವಲ ಹಲ್ಲುಜ್ಜುತ್ತಾರೆ ಮತ್ತು ಫೆÇ್ಲೀಸಿಂಗ್ ಮಾಡುವುದೇ ಇಲ್ಲ. ಫ್ಲಾಸ್ ಎಂದರೆ ಅತಿ ಸಪೂರವಾದ ನೈಲಾನ್ ದಾರ. ಇದು ಹಲ್ಲುಗಳ ನಡುವಣ ಅತಿ ಕಿರಿದಾದ ಸಂಧುಗಳಲ್ಲಿಯೂ ಇಳಿದು ಅಲ್ಲಿ ಸಂಗ್ರಹವಾಗಿದ್ದ ಕೂಳೆಯನ್ನು ನಿವಾರಿಸುತ್ತದೆ. ಹಲ್ಲಿನ ನೈರ್ಮಲ್ಯಕ್ಕೆ ಇದು ಮುಖ್ಯವಾಗಿದೆ ಮತ್ತು ನಿಮ್ಮ ಹಲ್ಲುಗಳ ಮೇಲೆ ಕೂಳೆ ಬಾರದಂತೆ ತಡೆಗಟ್ಟಲು ಇದು ಒಂದು ಪ್ರಯೋಜನಕಾರಿ ಮಾರ್ಗವೂ ಆಗಿದೆ. ಇದರ ಜತೆಗೆ ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸಲು ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತವೈದ್ಯರನ್ನು ನೀವು ಭೇಟಿ ಮಾಡಬೇಕು. ನಿಮ್ಮ ಹಲ್ಲುಗಳಿಗೆ ವೃತ್ತಿಪರ ಕಾಳಜಿಯೇ ಮುಂದೆ ಬರಬಹುದಾದ ಬಹಳಷ್ಟು ಹಲ್ಲಿನ ಸಮಸ್ಯೆಗಳನ್ನು ತಪ್ಪಿಸಬಹುದು. ಇದು ನಮ್ಮ ಸಲಹೆ.
