ಗುಣಮುಖರಾದವರ ಸಂಖ್ಯೆ 10 ಪಟ್ಟು ಹೆಚ್ಚಳ
ನವದೆಹಲಿ: ದೇಶದ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ತಿಂಗಳ ನಂತರ ಇದೇ ಮೊದಲ ಬಾರಿಗೆ 7 ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಈ ಮಧ್ಯೆ ಒಟ್ಟಾರೇ ಚೇತರಿಕೆ ಸಂಖ್ಯೆ 69 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತಲೂ ಗುಣಮುಖರಾಗುವವರ ಪ್ರಮಾಣ ಸುಮಾರು 10 ಪಟ್ಟು ಹೆಚ್ಚಾಗಿದೆ. 63 ದಿನಗಳ ನಂತರ ಇದೇ ಮೊದಲ ಬಾರಿಗೆ ಇಂತಹ ಗಮನಾರ್ಹ ಬೆಳವಣಿಗೆಯಾಗಿರುವುದಾಗಿ ಸಚಿವಾಲಯ ಹೇಳಿದೆ. ಆಗಸ್ಟ್ 22ರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆಯಿತ್ತು. ದಿನದಿಂದ ದಿನಕ್ಕೆ ಕೋವಿಡ್-19 ರೋಗಿಗಳ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಮುಂದುವರೆದಿದೆ ಎಂದು ತಿಳಿಸಿದೆ.
ಗುಣಮುಖರಾದವರ ಸಂಖ್ಯೆ 69, 48,497 ದಾಟಿದ್ದು, ಸಕ್ರಿಯ ಪ್ರಕರಣಗಳು ಸಂಖ್ಯೆ 62, 52, 988 ಆಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 73,979 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 54, 366 ಹೊಸ ಪ್ರಕರಣಗಳು ಕಂಡುಬಂದಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.89.53ಕ್ಕೆ ತಲುಪಿದೆ. ಕರೋನಾ ಸಂಖ್ಯೆ ಕಡಿಮೆಯಾಗುವುದರಿಂದ ದೇಶದಲ್ಲಿ ಎಲ್ಲಾ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ಹಾಗೆಂದ ಮಾತ್ರಕ್ಕೆ ಎಚ್ಚರ ತಪ್ಪಿದರೆ ಆಪತ್ತು ಕಟ್ಟಿಟ್ಟ ಬುತ್ತಿ.