- ಹಿಜ್ಬುಲ್ ಮುಖ್ಯಸ್ಥ ಸೇರಿ 18 ಮಂದಿ ಪಟ್ಟಿಗೆ
ನವ ದೆಹಲಿ: 1993 ಮುಂಬೈ ಸರಣಿ ಬಾಂಬ್ ಸ್ಫೋಟ, 1999ರ ಕಂದಹಾರ್ ವಿಮಾನ ಹೈಜಾಕಿಂಗ್, 2008ರ ಮುಂಬೈ ಉಗ್ರ ದಾಳಿ ಘಟನೆ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದರೆನ್ನಲಾದ 18 ಭಯೋತ್ಪಾದಕರನ್ನು ಯುಎಪಿಎ ಅಡಿ ಪಟ್ಟಿಗೆ ಸೇರಿಸಲಾಗಿದೆ.
ಕೇಂದ್ರ ಸರ್ಕಾರ ಕಾನೂನುಬಾಹಿರ ಕ್ರಮಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಉಗ್ರರ ಪಟ್ಟಿಗೆ 18 ಮಂದಿಯನ್ನು ಸೇರಿಸಲಾಗಿದೆ. ಈ 18 ಉಗ್ರರು ದೇಶದ ವಿವಿಧೆಡೆ ವಿವಿಧ ಕಾಲಘಟ್ಟಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ, 1999ರ ಕಂದಹಾರ್ ವಿಮಾನ ಹೈಜಾಕ್ ಘಟನೆ, 2008ರ ಮುಂಬೈ ಉಗ್ರ ದಾಳಿ, ಪುಲ್ವಾಮಾ ದಾಳಿ, ಪಠಾಣಕೋಟ್ ದಾಳಿ, ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯ ಇತ್ಯಾದಿ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ.
ಭಟ್ಕಳ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್, ದಾವೂದ್ ಬಂಟರಾದ ಛೋಟಾ ಶಕೀಲ್, ಟೈಗರ್ ಮೆಮೋನ್, ಜಾವೇದ್ ಚಿಕನಾ, ಐಎಸ್ಐ ಬೆಂಬಲಿತ ಉಗ್ರ ಸಾಜಿದ್ ಮೀರ್ ಮೊದಲಾದವರು ಈ 18 ಮಂದಿಯಲ್ಲಿ ಸೇರಿದ್ದಾರೆ.
ಸಾಜಿದ್ ಮೀರ್ ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ಐಎಸ್ಐ ನಿರ್ದೇಶನದಂತೆ ಭಾರತದ ಹಲವೆಡೆ ಉಗ್ರ ಕೃತ್ಯಗಳನ್ನ ಆಯೋಜಿಸದ್ದ. ಹಾಗೆಯೇ, ಅಬ್ದುಲ್ ರೌಫ್ ಅಸ್ಘರ್ ಕೂಡ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ನಿರ್ದೇಶನದ ಮೇರೆಗೆ ಸಂಸತ್ತು, ಪಠಾಣಕೋಟ ಮತ್ತು ಪುಲ್ವಾಮದಲ್ಲಿ ಉಗ್ರ ದಾಳಿಗೆ ನೆರವಾಗಿದ್ದನೆನ್ನಲಾಗಿದೆ.