- 40,000 ರೂ.ದಾಟಿದ ಕ್ವಿಂಟಾಲ್ ಬಿಳಿ(ಚಾಲಿ) ಅಡಿಕೆ
- ಮಳೆ, ಕರೋನಾದಿಂದ ಈ ಸಲ ಅಡಿಕೆ ಕೊಯ್ಲು ಸಂಕಟ!
ಮಂಗಳೂರು: ಕಳೆದ 2-3 ದಿನಗಳಿಂದ ಅಡಕೆ ಮಾರುಕಟ್ಟೆಯಲ್ಲಿ ಚಾಲಿ (ಬಿಳಿ) ಅಡಕೆಯ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಶಿ ಅಡಕೆಗಿಂತಲೂ (ಕೆಂಪು ಅಡಕೆ) ಚಾಲಿ ಅಡಕೆ ಧಾರಣೆ ಹೆಚ್ಚಾಗಿರುವುದು ಅಡಕೆ ಬೆಳಗಾರರ ವಲಯದಲ್ಲಿ ಸಂಚಲನ ಮೂಡಿಸಿದೆ.
ಅಡಿಕೆಯ ಪ್ರಮುಖ ಅಡಕೆ ಮಾರುಕಟ್ಟೆಯಾದ ಯಲ್ಲಾಪುರದಲ್ಲಿ ಉತ್ತಮ ಚಾಲಿ ಅಡಕೆ ದರ ಕ್ವಿಂಟಾಲಿಗೆ ಸರಾಸರಿ 39 ಸಾವಿರ ರೂ. ಆಸುಪಾಸಿನಲ್ಲಿ ಇದೆ. ಇದೇ ರೀತಿಯ ದರ ಏರಿಕೆಯು ಶಿರಸಿ ಹಾಗೂ ಸಾಗರ, ಮಂಗಳೂರು ಮುಂತಾದ ಅಡಕೆ ಮಾರುಕಟ್ಟೆಗಳಲ್ಲೂ ಇದೆ.
400 ಗಡಿ ದಾಟಿದ ಹೊಸ ಅಡಕೆ: ಚಾಲಿ ಅಡಕೆಯಲ್ಲಿ ಹಳೆಯ ಅಡಕೆ ದರ ಕೆಲ ದಿನಗಳ ಹಿಂದೆಯೇ ಕೆಜಿಗೆ 400 ರೂಪಾಯಿ ಆಸುಪಾಸಿಗೆ ತಲುಪಿತ್ತು. ಇದೀಗ ಕಳೆದ ಸೋಮವಾರ ಬಂಟ್ವಾಳದಲ್ಲಿ ಹಳೆ ಅಡಕೆ ದರ 410 ರೂ.ವರೆಗೆ ಏರಿಕೆಯಾಗಿದ್ದರೆ, ಶುಕ್ರವಾರವೇ ಬೆಳ್ತಂಗಡಿಯಲ್ಲಿ ಹಳೆ ಅಡಕೆ ರೂ. 410ಕ್ಕೆ ಮಾರಾಟವಾಗಿತ್ತು. ಕಾರ್ಕಳದಲ್ಲಿಯೂ ಕಳೆದ ಶನಿವಾರವೂ 395 ರೂ.ಗೆ ಮಾರಾಟವಾಗಿದೆ. ಆದರೆ ಅಚ್ಚರಿ ಹುಟ್ಟಿಸಿರುವುದು ಹೊಸ ಅಡಕೆ ದರ. ಬೆಳ್ತಂಗಡಿಯಲ್ಲಿ ಹೊಸ ಅಡಕೆ ದರ ಸೋಮವಾರ ಕೆಜಿಗೆ ಐತಿಹಾಸಿಕ 400 ರೂಪಾಯಿ ಗಡಿ ಮುಟ್ಟಿದೆ. ಇತ್ತ ಕಾರ್ಕಳದಲ್ಲಿಯೂ ಶುಕ್ರವಾರ 395 ರೂ.ಗೆ ಮಾರಾಟವಾಗಿದೆ. ಸುಳ್ಯದಲ್ಲಿ ಗುರುವಾರ 355 ರೂ. ಹಾಗೂ ಸೋಮವಾರ ಮಂಗಳೂರಿನಲ್ಲಿ 335 ರೂ. ಹಾಗೂ ಬಂಟ್ವಾಳದಲ್ಲಿ 330 ರೂ.ಗೆ ಮಾರಾಟವಾಗಿದೆ.
ಕರೋನಾ ಕಾರಣ ಕಳ್ಳ ಮಾರ್ಗದ ಮೂಲಕ ದೇಶಕ್ಕೆ ಬರುತ್ತಿದ್ದ ಅಡಕೆ ಬಂದ್ ಆಗಿದ್ದರಿಂದ ದೇಶೀಯ ಅಡಕೆಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣದಿಂದ ಚಾಲಿ ಅಡಕೆ ಬೆಲೆ ಏರುಗತಿಯಲ್ಲಿದೆ ಎನ್ನಲಾಗಿದೆ. ಇತ್ತ ಅಡಿಕೆ ನಿಷೇಧದ ಭೀತಿ ಹಿನ್ನೆಲೆ ಕೆಲವರು ಸ್ಟಾಕ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಕೂಡ ಇದೆ.
ಈ ಸಲ ಅಡಿಕೆ ಮಾರುಕಟ್ಟೆಗೆ ಬಂದಿಲ್ಲ?: ಮಳೆ, ಕರೋನಾ ಹಿನ್ನೆಲೆ ಮಲೆನಾಡು, ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಇನ್ನೂ ಕಠಾವು ಮಾಡಿಲ್ಲ. ಇನ್ನು ಮಾರುಕಟ್ಟೆಗೆ ಅಡಿಕೆ ಬಂದಿಲ್ಲ. ಈ ನಡುವೆ ಬೆಲೆ ಏರಿಕೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ.