- ಆಳ್ವಾಸ್ ಕಾಲೇಜಲ್ಲಿ ಓದಿದ್ದ ಯಶಾ ಶಿವಕುಮಾರ್
- ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಪಯಣ..!
ಬೆಂಗಳೂರು: ಕರಾವಳಿ ಚೆಲುವೆಯರು ಇಡೀ ಚಿತ್ರರಂಗ ಆಳುತ್ತಿದ್ದಾರೆ. ಐಶ್ವರ್ಯ, ಅನುಶ್ಕಾ, ದೀಪಿಕಾ, ರಾಧಿಕಾ ಹೀಗೆ ಸ್ಟಾರ್ ನಟಿಯರು ಕರಾವಳಿ ಮೂಲದವರಾಗಿದ್ದಾರೆ. ಇದೀಗ ಆ ಸಾಲಿಗೆ ಇನ್ನೊಬ್ಬಳು ಬೆಡಗಿ ಸೇರ್ಪಡೆಯಾಗಲು ಸಿದ್ಧಳಾಗಿದ್ದಾಳೆ.
ಈಗಾಗಲೇ “ಪದವಿಪೂರ್ವ” ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿ ಪೂರ್ವ” ಚಿತ್ರಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿಯಾಗಿದ್ದಾಳೆ. ಯಶಾ ಶಿವಕುಮಾರ್ ಈಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕಿ. ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇವರು. 2019ರಲ್ಲಿ ಫ್ಯಾಶನ್ ಎಬಿಸಿಡಿ ಸಂಸ್ಥೆ ಆಯೋಜಿಸಿದ್ದ “ಮಿಸ್ ಬೆಂಗಳೂರು 2019 ” “ಮಿಸ್ ಕರ್ನಾಟಕ ಇಂಟನ್ರ್ಯಾಷನಲ್ 2019” ಹಾಗೂ ಮುಂಬೈನಲ್ಲಿ ನಡೆದ “ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019” ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆಯಾಗಿದ್ದು, ಫ್ರೀ ಸ್ಟೈಲ್, ಬಾಲಿವುಡ್, ಮಣಿಪುರಿ ಮತ್ತು ಜಾನಪದದಂತಹ ಇತರ ನೃತ್ಯ ಪ್ರಾಕಾರಗಳನ್ನೂ ಚೆನ್ನಾಗಿ ಅರಿತಿದ್ದಾಳೆ. ಒಂದು ವರ್ಷ ಮಾಡೆಲಿಂಗ್ ಕ್ಷೇತ್ರದ ಅನುಭವವೂ ಇದೆ. ಆ ಅನುಭವ ಸಿನಿಮಾ ರಂಗಕ್ಕೆ ಬರಲು ಕಾರಣವಾಗಿದೆ. ಚಿತ್ರಕ್ಕೆ ಪೃಥ್ವಿ ಶಾಮನೂರ್ ನಾಯಕ, ಅಂಜಲಿ ಅನೀಶ್ ನಾಯಕಿ. ಇವರಿಬ್ಬರಿಗೂ ಇದು ಚೊಚ್ಚಲ ಸಿನಿಮಾ. ಅರ್ಜುನ್ ಜನ್ಯ ಸಂಗೀತವಿದೆ. ಸಂತೋಷ್ ರೈ ಪರಾಜೆ ಛಾಯಾಗ್ರಹಣವಿದೆ. ಒಟ್ಟಿನಲ್ಲಿ ಈ ಸಿನಿಮಾ ಮೂಲಕ ಕರಾವಳಿಯ ಮತ್ತೊಬ್ಬಳ ಎಂಟ್ರಿಯಾಗಿದೆ.