ಬೋನಸ್ನ ಆಸೆಗೆ ಹೋಗಿ 1.15 ಲಕ್ಷ ಬ್ಯಾಂಕ್ ಗ್ರಾಹಕ!
– ಪುತ್ತೂರಿನಲ್ಲಿ ಮತ್ತೊಬ್ಬರಿಗೆ ಸೈಬರ್ ಜಾಲದ ಮೋಸ: ಜನರೇ ಹುಷಾರ್
– ಕೊಕ್ಕಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನಾಥ ಶವಪತ್ತೆ
– ಮಂಗಳೂರು: ಹಾಜಬ್ಬ ಶಾಲೆಯಲ್ಲಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ
NAMMUR EXPRESS NEWS
ಪುತ್ತೂರು: ಬೋನಸ್ನ ಆಸೆಗೆ ಹೋಗಿ 1.15 ಲಕ್ಷ ಬ್ಯಾಂಕ್ ಗ್ರಾಹಕನೊಬ್ಬ ಕಳೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಲ್ಲಿ ವರದಿಯಾಗಿದೆ. ಕೆಮ್ಮಿಂಜೆ ಗ್ರಾಮದ ಪ್ರಗತಿ ಲೇಔಟ್ ನಿವಾಸಿ ಶ್ರೀನಿವಾಸ ಗೌಡ ಮೋಸ ಹೋಗಿದ್ದು, ಅವರ ಮೊಬೈಲ್ಗೆ ಮೇ 26ರಂದು ಆಕ್ಸಿಸ್ ಬ್ಯಾಂಕ್ ಎಂಬ ಹೆಸೆರಿನಲ್ಲಿ ಬಂದಿರುವ ಸಂದೇಶ ತೆರೆದಾಗ ಆಕ್ಸಿಸ್ ಬ್ಯಾಂಕ್ ಹೋಲುವ ಪೇಜ್ ತೆರೆದಿತ್ತು. ಅದರಲ್ಲಿ ನಿಮ್ಮ ಖಾತೆಗೆ 13,879 ರೂ. ಬೋನಸ್ ಬಂದಿರುವುದಾಗಿ ಸಂದೇಶವಿತ್ತು. ಈ ಬೋನಸ್ ಪಡೆಯಲು ವೆಬ್ಸೈಟ್ನಲ್ಲಿ ಕೇಳಿರುವ ಬ್ಯಾಂಕ್ ಖಾತೆ ಸಂಖ್ಯೆ ಸಹಿತ ಎಲ್ ಮಾಹಿತಿಯೊಂದಿಗೆ ಒಟಿಪಿ ಸಂಖ್ಯೆಯನ್ನೂ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ 90,850 ರೂ. ಹಾಗೂ 24,500 ರೂ. ಸೇರಿ ಒಟ್ಟು 1,15,358 ರೂ. ಕಡಿತಗೊಂಡಿರುವ ಸಂದೇಶ ಬಂದಿದೆ. ಅನುಮಾನಗೊಂಡು ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅವರ ಖಾತೆಯಿಂದ ಅಪರಿಚಿತ ಖಾತೆಗೆ ಹಣ ವರ್ಗಾವಣೆಗೊಂಡು ತಾನು ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.
ಮಂಗಳೂರು: ಹಾಜಬ್ಬ ಶಾಲೆಯಲ್ಲಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ
ಮಂಗಳೂರು: ಒಂದು ವಾರದ ಹಿಂದೆ ಮಂಗಳೂರಿನ ಕೊಣಾಜೆ ಸಮೀಪದ ಹರೇಕಳ ಗ್ರಾಮದ ನ್ಯೂಪಡ್ಪುವಿನಲ್ಲಿರುವ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಜಬ್ಬನವರ ಶಾಲೆಯಲ್ಲಿ ಬಾಲಕಿಯೊಬ್ಬಳು ಗೋಡೆ ಕುಸಿದು ಮೃತಪಟ್ಟಿದ್ದಳು. ಇದೀಗ ಸರ್ಕಾರದ ಕಡೆಯಿಂದ ಮೃತ ಬಾಲಕಿಯ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ನ್ಯೂಪಡ್ಪು ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಸಿದ್ದೀಕ್-ಜಮೀಲಾ ದಂಪತಿ ಪುತ್ರಿ ಶಾಝಿಯಾ(7) ಮೇ 20ರಂದು ಶಾಲೆಯ ಗೇಟ್ ಸಮೇತ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಳು. ಶಾಝಿಯಾ ಆ ದಿನ ಶಾಲೆಯಲ್ಲಿ ರಜೆಯಿದ್ದರೂ ಎನ್ಎಸ್ಎಸ್ ಶಿಬಿರ ನಡೆಯುತ್ತಿದ್ದ ಕಾರಣ ಭಾಗವಹಿಸುವುದಕ್ಕೆ ಬಂದಿದ್ದಳು. ಸ್ಪೀಕರ್ ಯುಟಿ ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರದಿಂದ ಬಾಲಕಿಯ ತಾಯಿಯ ಬ್ಯಾಂಕ್ ಖಾತೆಗೆ ಐದು ಲಕ್ಷ ರೂ.ವನ್ನು ಜಮೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕೊಕ್ಕಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನಾಥ ಶವಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮದ ಹಿತ್ತಿಲು ಸಮೀಪದ ಗೇರು ಗುಡ್ಡೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಈ ವ್ಯಕ್ತಿಯು ನಾಲ್ಕೈದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಪಕ್ಕದಲ್ಲಿ ಬ್ಯಾಗ್ ದೊರೆತಿದ್ದು, ಅದರಲ್ಲಿ ಬೆಂಗಳೂರಿನಿಂದ ಹಾಸನ ಹಾಗೂ ಹಾಸನದಿಂದ ಕೊಕ್ಕಡಕ್ಕೆ ಮೇ 24ರಂದು ಬಸ್ನಲ್ಲಿ ಪ್ರಯಾಣಿಸಿರುವ ಟಿಕೆಟ್ ಹಾಗೂ ಬ್ಯಾಂಕ್ ಎಟಿಎಂ ಕಾರ್ಡ್ ಲಭಿಸಿದೆ. ಈ ಕಾರ್ಡ್ನಲ್ಲಿ ನಿಂಗಣ್ಣ ಎಂದು ಹೆಸರು ನಮೂದಿಸಲಾಗಿದೆ.
ಸ್ಥಳಕ್ಕೆ ಧರ್ಮಸ್ಥಳದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಗಾಣಿಗ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅರಸಿನಮಕ್ಕಿ ಹಾಗೂ ಶಿಶಿಲದ ಶೌರ್ಯ ಘಟಕದ ತಂಡದ ಸದಸ್ಯರ ಸಹಕಾರದಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಸದ್ಯಕ್ಕೆ ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ಪೊಲೀಸರು ಸಂಬಂಧಿಕರನ್ನು ಪತ್ತೆ ಹಚ್ಚುವತ್ತ ಪ್ರಯತ್ನಿಸುತ್ತಿದ್ದಾರೆ.