- ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕೊಚ್ಚಿ ಕೊಚ್ಚಿ ಕೊಲೆ
- ಕರಾವಳಿಯಲ್ಲಿ ಮತ್ತೆ ಹೆಚ್ಚಾದ ಕೊಲೆ: ಜನತೆಗೆ ಭಯ..!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ಮತ್ತೋರ್ವ ರೌಡಿ ಶೀಟರ್ ಕೊಲೆಯಾಗಿದ್ದಾನೆ. ಬುಧವಾರ ಮಧ್ಯಾಹ್ನವಷ್ಟೆ ಬಂಟ್ವಾಳದ ರೌಡಿ ಶೀಟರ್, ನಟ ಸುರೇಂದ್ರ ಬಂಟ್ವಾಳ ಎಂಬಾತನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಘಟನೆ ಮಾಸುವ ಮುನ್ನವೇ ಎರಡನೇ ದಿನದಲ್ಲಿ ಕಲ್ಲಡ್ಕದ ರೌಡಿ ಶೀಟರ್ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (27) ಎಂಬಾತನ ಕೊಲೆಯಾಗಿದ್ದು ಜನ ಆತಂಕಗೊಳ್ಳುವಂತೆ ಮಾಡಿದೆ.
ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಸೇತುವೆ ಬಳಿ ಫಾರೂಕ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಘಾತ ನಡೆಸಿ ಬಳಿಕ ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕಡಿದು ಕೊಲೆ ನಡೆಸಿ ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಕೈ, ಕಾಲು, ಹೊಟ್ಟೆ, ಕುತ್ತಿಗೆ ಭಾಗಗಳಿಗೆ ಯದ್ವಾತದ್ವಾ ಕಡಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಉಮರ್ ಫಾರೂಕ್ನನ್ನು ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಪೆÇಲೀಸರ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಅಷ್ಟರಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ. ಫಾರೂಕ್ ಸ್ನೇಹಿತ ವಲಯದಲ್ಲೇ ಒಂದು ಕಾಲದಲ್ಲಿ ಗುರುತಿಸಿಕೊಂಡು ಬಳಿಕ ವೈಯುಕ್ತಿಕ ದ್ವೇಷ ಕಟ್ಟಿಕೊಂಡು ಬೇರೆಯಾದ ಮಂದಿಯ ತಂಡವೇ ಈ ಕೊಲೆ ಕೃತ್ಯ ನಡೆಸಿದೆ ಎಂಬ ಮಾಹಿತಿ ಮೇಲ್ನೋಟಕ್ಕೆ ಪೆÇಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದ್ದು, ಪೆÇಲೀಸರ ತನಿಖೆಯ ಬಳಿಕವಷ್ಟೆ ಘಟನೆಯ ಸತ್ಯಾಸತ್ಯತೆ ಹೊರ ಬರಲಿದೆ. ಮೃತ ಫಾರೂಕ್ ಅವಿವಾಹಿತನಾಗಿದ್ದು, ಕೊಲೆಯತ್ನ ಸಹಿತ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿ ದಾಖಲಾಗಿದ್ದಾನೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಸುರೇಂದ್ರ ಬಂಟ್ವಾಳ ಹತ್ಯಾ ಆರೋಪಿಗಳ ಜಾಡು ಬೇಧಿಸಲು ಬಂಟ್ವಾಳದಲ್ಲಿ ಮೂರು ಪೆÇಲೀಸ್ ತಂಡಗಳು ತಿರುಗಾಡುತ್ತಿರುವ ಸಂದರ್ಭದಲ್ಲೇ ಹಾಡಹಗಲೇ ಬೀದಿ ಕಾಳಗದಲ್ಲಿ ಇನ್ನೋರ್ವ ರೌಡಿ ಶೀಟರ್ ಹತ್ಯೆಯಾಗಿರುವುದು ಇದೀಗ ಬಂಟ್ವಾಳದ ಕಾನೂನು ಸುವ್ಯವಸ್ಥೆ ಬಗ್ಗೆ ಜನ ಆತಂಕಗೊಳ್ಳುವಂತೆ ಮಾಡಿದೆ. ಎರಡೂ ಘಟನೆಗಳ ಆರೋಪಿಗಳ ಪತ್ತೆಗೆ ಪೆÇಲೀಸರು ಸಕ್ರಿಯರಾಗಿದ್ದು, ಆರೋಪಿಗಳ ಬಂಧನದ ಬಳಿಕವಷ್ಟೆ ಘಟನೆಯ ನೈಜ ಕಾರಣಗಳು ತಿಳಿದು ಬರಲಿದೆ.