ಪುತ್ತೂರಿನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಮೂವರು ಸಾವು!
– ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ..!
NAMMUR EXPRESS NEWS
ಪುತ್ತೂರು: ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ಆಲ್ಟೋ ಕಾರು ಕಂದಕಕ್ಕೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕಂದಕಕ್ಕೆ ಆಲ್ಟೋ ಕಾರು ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಸುಕಿನ ಜಾವ 4:15 ರ ಸುಮಾರಿಗೆ ನಡೆದಿದೆ. ಮೃತರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ್, ಚಿದಾನಂದ, ರಮೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಕಾರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ತೆರಳುತ್ತಿದ್ದು, ನಸುಕಿನ ಜಾವ 4:15 ರ ಸುಮಾರಿಗೆ ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
– ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ.!!
ಮಲ್ಪೆ : ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಅಣ್ಣಕೃಷ್ಣ ತಿಮ್ಮಪ್ಪ (48) ನಾಪತ್ತೆಯಾದವರು. ಡಿ. 25ರಂದು ಬೆಳಗ್ಗಿನ ಜಾವ ಅರಬ್ಬಿ ಸಮುದ್ರದಲ್ಲಿ 13 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ತಕ್ಷಣ ಜತೆಯಲ್ಲಿದ್ದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.