ಪಶುವೈದ್ಯ ಹೊಡೆದ ಏಟಿಗೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು !
– ಬೆಳ್ತಂಗಡಿಯ ಕೊಕ್ಕಡದಲ್ಲಿ ಅಪರೂಪದ ಪ್ರಕರಣ ಬೆಳಕಿಗೆ
– ಏನಿದು ಘಟನೆ.. ಕಾಯಿಲೆಯಿಂದ ಮೃತಪಟ್ಟಿದ್ದಾರೆಯೋ?
NAMMUR EXPRESS NEWS
ಬೆಳ್ತಂಗಡಿ: ಪಶು ವೈದ್ಯರೊಬ್ಬರು ಕೊಟ್ಟ ಹೊಡೆತಕ್ಕೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಇದೊಂದು ವಿಚಿತ್ರ ಘಟನೆಯಾದರೂ ವಾಸ್ತವ. ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ವಾಪಾಸ್ಸಾಗುತ್ತಿದ್ದರು. ಅಷ್ಟೊತ್ತಿಗೆ ದಾರಿಮಧ್ಯೆ ಪರಿಚಿತ ಪಶು ವೈದ್ಯಾಧಿಕಾರಿ ಕಾಣಿಸಿದ್ದು, ಮಾತನಾಡುತ್ತಲೇ ಒಂದೇಟು ಹೊಡೆದಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಕೂಡಲೇ ಕುಸಿದು ಬಿದ್ದಿದ್ದಾರೆ. ಮೃತ ವ್ಯಕ್ತಿಯನ್ನು ಕೊಕ್ಕಡ ಗ್ರಾಮದ ಕೃಷ್ಣ ಯಾನೆ ಕಿಟ್ಟ(58) ಎಂದು ಗುರುತಿಸಲಾಗಿದೆ. ಕೃಷ್ಣ ಅವರು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಆರೋಗ್ಯ ಸುಧಾರಿಸಿದ್ದ ಕಾರಣ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದರು.
ಬಸ್ ಮೂಲಕ ಕೊಕ್ಕಡಕ್ಕೆ ಬಂದಿಳಿದ್ದ ಕೃಷ್ಣ ಅವರಿಗೆ ಕೊಕ್ಕಡದ ಪಶುವೈದ್ಯರಾದ ಡಾ. ಕುಮಾರ್ ಸಿಕ್ಕಿದ್ದರು. ಜ್ವರ ಇದ್ದ ಕಾರಣ ಇಷ್ಟು ಬೇಗ ಏಕೆ ಡಿಸ್ಚಾರ್ಜ್ ಆಗಿ ಬಂದೆ? ಪೂರ್ಣ ಗುಣಮುಖರಾಗಿ ಬರಬೇಕು ಎಂದು ಸಿಟ್ಟಾದ ಕುಮಾರ್, ಕೃಷ್ಣ ಅವರಿಗೆ ಒಂದೇಟು ಬಿಟ್ಟಿದ್ದಾರೆ. ಕುಮಾರ್ ಹೊಡೆದ ಪಟ್ಟಿಗೆ ಕೃಷ್ಣ ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಆದರೆ, ಹೊಡೆತದಿಂದ ಕೃಷ್ಣ ಮೃತಪಟ್ಟಿದ್ದಾರೆಯೋ ಅಥವಾ ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆಯೋ ಎನ್ನುವುದು ಮೃತದೇಹದ ಮರಣೋತ್ತರ ಪರೀಕ್ಷೆಯಿಂದ ಸ್ಪಷ್ಟವಾಗಬೇಕಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.