ಪುತ್ತೂರಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ!
– 7 ಮಂದಿಗೆ ಗಂಭೀರ ಗಾಯ: ಏನಿದು ಘಟನೆ?
– 20 ಮಂದಿ ಕಾರ್ಮಿಕರು ದುರ್ಘಟನೆ ವೇಳೆ ಕೆಲಸ
– ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳ ರವಾನೆ
NAMMUR EXPRESS NEWS
ಪುತ್ತೂರು: ನಿರ್ಮಾಣ ಹಂತದ ಸೇತುವೆಯೊಂದು ಕುಸಿದು ಏಳು ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ಸೇತುವೆಯ ನಿರ್ಮಾಣ ಕಾರ್ಯವು ಕೊನೆಯ ಹಂತ ತಲುಪಿತ್ತು. ಸೋಮವಾರ ಬೆಳಗ್ಗೆ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಸೇತುವೆಯು ಕುಸಿದು ಈ ದುರ್ಘಟನೆ ಸಂಭವಿಸಿರುವುದಾಗಿ ವರದಿಯಾಗಿದೆ. ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ವೇಳೆ ತಳಭಾಗದ ರಾಡ್ ಜಾರಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದೆ. ಸೇತುವೆ ಕುಸಿಯುವ ವೇಳೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದರಿಂದ ಸೇತುವೆ ಸಾಮಾಗ್ರಿಯ ಮಧ್ಯೆ ಓರ್ವ ಕಾರ್ಮಿಕ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.
ಸುಮಾರು 20 ಮಂದಿ ಕಾರ್ಮಿಕರು ದುರ್ಘಟನೆ ವೇಳೆ ಕೆಲಸ ಮಾಡುತ್ತಿದ್ದರು. ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗಾಯಗೊಂಡವರಲ್ಲಿ ಮಹೇಶ್(52), ವಿಜಯ್ ಸರ್ವೆ(32), ನಾಗರಾಜ್ ಅವರನ್ನು ಪುತ್ತೂರಿನ ಆಸತ್ರೆಗೆ ದಾಖಲಿಸಲಾಗಿದೆ. ಮ್ಯಾಥನ್(40), ವಿಜಯ್(32), ಅಕ್ತರ್ ಉಲ್ಲಾ(50) ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಪುಣಚದಿಂದ ಬರೆಂಜ, ನಿಡ್ಯಾಳ, ಕುರುಡಕಟ್ಟೆ ಮೂಲಕ ಬಲ್ನಾಡು ರಸ್ತೆ ಸಂಪರ್ಕಿಸುವ ಬರೆಂಜದಲ್ಲಿರುವ ತೋಡಿಗೆ ಕಳೆದ ಆರು ತಿಂಗಳಿನಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.