ಶಾಸಕ ಹರೀಶ್ ಪೂಂಜಾ ವಿರುದ್ದ ಕೇಸ್!
– ಬಂಧಿತ ಬಿಜೆಪಿ ಮುಖಂಡನ ಬಿಡುಗಡೆಗೆ ಆಗ್ರಹಿಸಿ ಠಾಣಾಧಿಕಾರಿಗೆ ಬೆದರಿಕೆ ದೂರು
– ಕಲ್ಲಿನ ಅಕ್ರಮ ಗಣಿಗಾರಿಕೆ, ಸ್ಪೋಟಕ ಅಕ್ರಮ ದಾಸ್ತಾನು ಪ್ರಕರಣ
– ಅಕ್ರಮ ಗಣಿಗಾರಿಕೆ: ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷನಿಗೆ ನ್ಯಾಯಾಂಗ ಬಂಧನ!
NAMMUR EXPRESS NEWS
ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಪೋಟಕ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಯ ಬಿಡುಗಡೆ ಆಗ್ರಹಿಸಿ ಬೆಳ್ತಂಗಡಿ ಠಾಣೆಯ ಪೋಲೀಸರಿಗೆ ಬೈದು, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಭಾನುವಾರ ಎಫ್.ಐ. ಆರ್ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ ವೇಳೆ ಠಾಣೆಗೆ ಬಂದ ಶಾಸಕರು, ತಮ್ಮ ಪಕ್ಷದ ಕಾರ್ಯಕರ್ತನಾದ ಶಶಿರಾಜ್ ಶೆಟ್ಟಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಪೊಲೀಸ್ ಇಲಾಖೆ ಮತ್ತು ಪೊಲೀಸರ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.ಈ ಬಗ್ಗೆ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಕಲಂ 353,504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷನಿಗೆ ನ್ಯಾಯಾಂಗ ಬಂಧನ
ಮೇಲಂತಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಮತ್ತು ತಂಡ ಹಾಗೂ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿತ್ತು. ಈ ವೇಳೆ ಸ್ಥಳದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ ಹಿಟಾಚಿ, ಟ್ರಾಕ್ಟರ್, ಸ್ಪೋಟಕ ಮುಂತಾದ ಸೊತ್ತು ವಶಪಡಿಸಿಕೊಳ್ಳಲಾಗಿತ್ತು.
ಅಕ್ರಮವಾಗಿ ಸ್ಫೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದರು. ಆರೋಪಿಯನ್ನು ಇದೀಗ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಬಿಜೆಪಿ ಮುಖಂಡ ಪ್ರಮೋದ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ