ಮಾವಿನ ಹಣ್ಣಿಗೆ ಕೆಮಿಕಲ್: ಕೇಸ್ ದಾಖಲು!
– ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿ ಅಧಿಕಾರಿಗಳ ದಾಳಿ
– ಎಲ್ಲೆಡೆ ಕೆಮಿಕಲ್ ಹಣ್ಣು ಕಂಡರೆ ದೂರು ನೀಡಿ..!
NAMMUR EXPRESS NEWS
ಮೂಡಬಿದಿರೆ: ಮಾವಿನ ಹಣ್ಣನ್ನು ಮಾಗಿಸಲು ಕಾರ್ಬೈಡ್ ಎಂಬ ವಿಷಕಾರಿ ರಾಸಾಯನಿಕವನ್ನು ಯಥೇಚ್ಛವಾಗಿ ಬಳಸುತ್ತಿದ್ದು, ಇದರಿಂದ ಹಣ್ಣು ತಿನ್ನಲು ಹಿಂಜರಿಯುವಂತೆ ಆಗಿದೆ. ಇನ್ನು ಮೂಡುಬಿದಿರೆ ಪೇಟೆಯಲ್ಲೂ ರಾಸಾಯನಿಕ ಬಳಸಿ ಕೃತಕವಾಗಿ ಮಾವಿನಕಾಯಿಗಳನ್ನು ಹಣ್ಣು ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಡಬಿದಿರೆ ಪುರಸಭೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ ಕೃತಕವಾಗಿ ಹಣ್ಣು ಮಾಡಲ್ಪಟ್ಟ ಮಾವಿನ ಹಣ್ಣುಗಳು ಪತ್ತೆಯಾಗಿವೆ.
ಸಂತೆಯಲ್ಲಿನ ಹಣ್ಣಿನ ಅಂಗಡಿಗಳು ಹಾಗೂ ರಸ್ತೆ ಬದಿ ಹಣ್ಣು ವ್ಯಾಪಾರ ಮಳಿಗೆಗಳಿಗೆ ದಾಳಿ ನಡೆಸಲಾಗಿದ್ದು, ರಾಸಾಯನಿಕ ಬಳಕೆ ಪತ್ತೆಯಾದ ಮಾವಿನ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.ಇನ್ನು ಮುಂದೆ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಆರೋಗ್ಯಕ್ಕೂ ಹಾನಿಕಾರವಾಗಿರುತ್ತದೆ. ಇದರಿಂದ ಅಲರ್ಜಿಯಿಂದ ಹಿಡಿದು ತುರಿಕೆ, ಗಂಟಲು ಕೆರೆತ , ಕ್ಯಾನ್ಸರ್ ನಂತ ಮಹಾಮಾರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ದ ದಿಟ್ಟಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ