ಕರಾವಳಿ ಕ್ರೈಂ ನ್ಯೂಸ್
* ಮಂಗಳೂರು: ಕೃಷಿಕನ ಮೇಲೆ ಚಿರತೆ ದಾಳಿ, ಜೀವ ಉಳಿಸಿಕೊಂಡ!
* ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸೆರೆ
* ಕಾಪು: ಟ್ಯಾಂಕರ್-ಬೈಕ್ ನಡುವೆ ಭೀಕರ ಅಪಘಾತ: ಸವಾರ ಮೃತ್ಯು
* ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ
* ಬಂಟ್ವಾಳ: ಬಸ್ ಬೈಕ್ಗೆ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು!
* ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ
NAMMUR EXPRESS NEWS
ಮಂಗಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ಕೃಷಿಕನೋರ್ವನ ಮೇಲೆ ಚಿರತೆ ದಾಳಿ ನಡೆಸಿದೆ. ನ.3 ಬೆಳಗ್ಗೆ ಈ ಘಟನೆ ನಡೆದಿದ್ದು ದನಗಳಿಗೆ ಹುಲ್ಲು ತರಲು ತೆರಳಿದ್ದ ಕೃಷಿಕನ ಮೇಲೆ ಚಿರತೆ ದಾಳಿ ಮಾಡಿದೆ.ಕಲ್ಕರೆ ನಿವಾಸಿ ಲಿಗೋರಿ ಪಿರೇರಾ (65) ಚಿರತೆ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಎಳತ್ತೂರು ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು ಚಿರತೆ ದಾಳಿಗೆ ಹೆದರದೆ ಲಿಗೋರಿ ಅವರು ಕೈಯಲ್ಲಿದ್ದ ಕೋಲನ್ನು ಚಿರತೆ ಮೇಲೆ ಬೀಸಿದ್ದಾರೆ. ಇದರಿಂದ ಗಾಬರಿಗೊಂಡ ಚಿರತೆ ಕಾಡಂಚಿಗೆ ಪರಾರಿಯಾಗಿದೆ. ಚಿರತೆ ದಾಳಿಯಿಂದ ಲಿಗೋರಿ ಅವರ ಮುಖಕ್ಕೆ ಮತ್ತು ಬೆನ್ನಿಗೆ ಗಾಯಗಳಾಗಿದ್ದು ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಾಯಗಳಿಗೆ ಹೊಲಿಗೆ ಹಾಕಲಾಗಿದೆ. ಕಳೆದೊಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಅನೇಕ ಮನೆಗಳ ನಾಯಿ, ಸಣ್ಣ ಜಾನುವಾರುಗಳು ಚಿರತೆಗೆ ಆಹಾರವಾಗಿದೆ.
* ಬಂಟ್ವಾಳ: ಬಸ್ ಬೈಕ್ಗೆ ಡಿಕ್ಕಿ ಸ್ಥಳದಲ್ಲಿಯೇ ಓರ್ವ ಸಾವು!
ಬಂಟ್ವಾಳ: ಸೆಲಿನಾ ಬಸ್ ಬೈಕ್ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದ ಕಡೆಗೋಳಿ ಎಂಬಲ್ಲಿ ಭಾನುವಾರ ಸಂಭವಿಸಿದೆ. ಕಡೆಗೋಳಿ ನಿವಾಸಿ ಪ್ರವೀಣ (30) ಮೃತ ದುರ್ದೈವಿ. ಸಂದೀಪ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿದೆ. ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಗಂಭೀರವಾಗಿ ಗಾಯಗೊಂಡ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
* ಮಂಗಳೂರು: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ
ಮಂಗಳೂರು: ಅಮೆಜಾನ್ ಕಂಪನಿಗೆ ಬರೋಬ್ಬರಿ 30 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ರಾಜ್ಯದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು. ಆರೋಪಿಗಳು ಅಮೆಜಾನ್ನಲ್ಲಿ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ವಸ್ತುಗಳ ಡಿಲೇವರಿ ಪಡೆಯಲು ಟೈಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು. ವಸ್ತುವಿನ ಬಾಕ್ಸ್ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು. ವಸ್ತು ಅಮೇಜಾನ್ ಗೋಡಾನ್ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.ಆರೋಪಿಗಳು ಕಳೆದ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದಾರೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ.ತನಿಖೆ ನಡೆಸಿ ಖದೀಮರ ಮೋಸದ ಜಾಲ ಭೇದಿಸಿದ ಮಂಗಳೂರಿನ ಉರ್ವ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಸೆರೆ
ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್ ಸಪಾಝ್ (29)ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ ಚರಣ್ ಯು ಭಂಡಾರಿ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 53,300 ಸಾವಿರ ಮೌಲ್ಯದ 740 ಗ್ರಾಂ ತೂಕ ಗಾಂಜಾ, ಸ್ಕೂಟರ್ ಅಂದಾಜು ಮೌಲ್ಯ ರೂ, 25,000, ನಗದು ರೂ, 2170 ಹಾಗೂ ಎರಡು ಮೊಬೈಲ್ ಪೋನ್ ಸಹಿತ ಒಟ್ಟು 98,770 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
* ಕಾಪು: ಟ್ಯಾಂಕರ್-ಬೈಕ್ ನಡುವೆ ಭೀಕರ ಅಪಘಾತ: ಸವಾರ ಮೃತ್ಯು
ಉಡುಪಿ: ಟ್ಯಾಂಕರ್ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೊಪ್ಪಲಂಗಡಿ ಬಳಿ ನಡೆದಿದೆ. ಮಂಗಳೂರುನಿಂದ ಉಡುಪಿ ಕಡೆ ಹೋಗುತ್ತಿದ್ದ ಟ್ಯಾಂಕರ್ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದು ಹರೀಶ್ ಕುಮಾರ್(45) ಮೃತ ದುರ್ದೈವಿ. ಟ್ಯಾಂಕರ್ ಚಾಲಕನ ನಿರ್ಲಕ್ಷದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ
ಉಡುಪಿ: ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಪುಣ್ಯಕ್ಷೇತ್ರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರು ಗಾಯಗೊಂಡ ದುರ್ಘಟನೆ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.ಕೊಲ್ಲೂರಿನತ್ತ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ್ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಹಿಳೆಯರೂ ಸೇರಿದಂತೆ ಪ್ರವಾಸಿಗರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೂರಿಸ್ಟ್ ವಾಹನ ಜಖಂ ಗೊಂಡಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.