ಕರಾವಳಿ ನ್ಯೂಸ್
– ಉಡುಪಿ: ಭಯದ ವಾತಾವರಣ ಸೃಷ್ಟಿಸಿದ ಯುವಕನ ಸೆರೆ
– ಬಂಟ್ವಾಳ: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು – 2.3ಲಕ್ಷ ಮೌಲ್ಯದ ಚಿನ್ನಾಭರಣ ಕಳವು!
– ಉಡುಪಿ: ಸಿಲಿಂಡರ್ ಸ್ಫೋಟ; ಅಪಾರ್ಟ್ ಮೆಂಟ್ ನ ಗೋಡೆಗಳು ಛಿದ್ರ!
NAMMUR EXPRESS NEWS
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಯುವಕನೋರ್ವನನ್ನು ಸೆರೆ ಹಿಡಿದ ಘಟನೆ ಉಡುಪಿಯ ಅಜ್ಜರಕಾಡು ಬಳಿ ನಡೆದಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಾಯವಾಣಿ ಪೋಲಿಸರ ಸಹಕಾರದಿಂದ ಯುವಕನನ್ನು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲವು ದಿನಗಳಿಂದ ಯುವಕ ಉಡುಪಿ ನಗರದಲ್ಲಿ ರಂಪಾಟ ನಡೆಸಿದ್ದನು. ರಕ್ಷಿಸಲ್ಪಟ್ಟ ಯುವಕ ಬೇಲೂರು ತಾಲೂಕಿನ ಚನ್ನಕೇಶವ ನಗರದ ಹೇಮಂತ್ ಎಂದು ತಿಳಿದುಬಂದಿದೆ. ವಾರಸುದಾರರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 91649 01111 ಅನ್ನು ಸಂಪರ್ಕಿಸಬಹುದಾಗಿದೆ.
* ಬಂಟ್ವಾಳ: ದೇವಸ್ಥಾನಕ್ಕೆ ನುಗ್ಗಿದ ಕಳ್ಳರು – 2.3ಲಕ್ಷ ಮೌಲ್ಯದ ಚಿನ್ನಾಭರಣ ಕಳವು!
ಬಂಟ್ವಾಳ: ಫರಂಗಿಪೇಟೆ ಸಮೀಪದ ಸಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನಕ್ಕೆ ನ. 4ರಂದು ಮುಂಜಾನೆ ಕಳ್ಳರ ತಂಡವೊಂದು ನುಗ್ಗಿ 2.3 ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳರು ಹಿಂಬಾಗಿಲು ಮುರಿದು ಗರ್ಭಗುಡಿ ಪ್ರವೇಶಿಸಿದಾಗ ಈ ಘಟನೆ ನಡೆದಿದೆ. 1.5 ಕೆ.ಜಿ ತೂಕದ ಬೆಳ್ಳಿಯ ಪೀಠ, ಚಿನ್ನದ ಮೂಗುತಿ, ವಿಧಿವತ್ತಾದ ಛತ್ರಿ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಒಟ್ಟಾರೆಯಾಗಿ ಅಂದಾಜು 2 ಕೆಜಿ ಬೆಳ್ಳಿ ಹಾಗೂ ಮೂರು ಸಾರ್ವಭೌಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಬರಿಗಾಲಿನಲ್ಲಿದ್ದರು ಮತ್ತು ತಮ್ಮ ಗುರುತುಗಳನ್ನು ಮರೆಮಾಚಲು ಮುಖವಾಡಗಳನ್ನು ಧರಿಸಿದ್ದರು. ಕಳ್ಳತನದ ನಂತರ ತಂಡವು ಸಾಗಿದ ಮಾರ್ಗವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ನಿರ್ಗಮನ ಮಾರ್ಗದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳನ್ನು ಹಿಡಿಯಲಾಗುವುದು ಎಂದು ಭರವಸೆ ನೀಡಿದ್ದಾರೆ.
* ಉಡುಪಿ: ಸಿಲಿಂಡರ್ ಸ್ಫೋಟ; ಅಪಾರ್ಟ್ ಮೆಂಟ್ ನ ಗೋಡೆಗಳು ಛಿದ್ರ!
ಉಡುಪಿ: ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್ ವೊಂದರಲ್ಲಿ ನ. 4ರಂದು ರಾತ್ರಿ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೊಠಡಿಯಲ್ಲಿ ಪಾರ್ಟಿ ಮಾಡುತ್ತಿದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಭವನೀಯ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.